

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಸ್ಥಾಪಿಸಲು ಉದ್ದೇಶಿರುವ ಛತ್ರಪತಿ ಶಿವಾಜಿ ಮಹಾರಾಜ ಪುತ್ಥಳಿ ಸ್ಥಾಪನೆಗೆ ನನ್ನ ವಿರೋಧವಿಲ್ಲ. ಸುಖಾ ಸುಮ್ಮನೇ ಆರೋಪ ಮಾಡಲಾಗುತ್ತಿದೆ. ಸತ್ಯಾಂಶ ಅರಿಯಬೇಕಿದ್ದರೇ ಮುಚಖಂಡಿ ವೀರಭದ್ರೇಶ್ವರ, ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ ಆಣೆ-ಪ್ರಮಾಣಕ್ಕೂ ಸಿದ್ದನಿದ್ದೇನೆ. ನಾನು ಸುಳ್ಳು ಹೇಳಿದರೇ ವಿ.ಪ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೀವು ಸುಳ್ಳು ಹೇಳಿದರೇ ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕು. ಪ್ರಮಾಣ ಮಾಡಲು ಸ್ವತಃ ಅವರೇ ಬರಬೇಕು ಅಂತ ವಿ.ಪ ಸದಸ್ಯ ಪಿ.ಎಚ್.ಪೂಜಾರ ಸವಾಲ್ ಹಾಕಿದರು.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾಜಿ ಹಾಗೂ ಬಸವೇಶ್ವರ ಪುತ್ಥಳಿಗೆ ಯಾವುದೇ ಸಂದರ್ಭದಲ್ಲಿ ನಾನು ವಿರೋಧ ಮಾಡಲು ಸಾಧ್ಯವಿಲ್ಲ. ಸಮಾಜ ಒಡೆಯುವ ನೀಚ ಕೃತ್ಯಕ್ಕೆ ಇಳಿದು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸಹಿಸಲು ಸಾಧ್ಯವಿಲ್ಲ. ಸಂಘ ಪರಿವಾರದಿಂದ ಬಂದವನು ನಾನು ಹಿಂದು ವಿರೋಽ ಚಟುವಟಿಕೆ ಮಾಡಲು ಸಾಧ್ಯವಿಲ್ಲ. ಸಭೆ, ಸಮಾರಂಭ, ಪ್ರತಿಭಟನೆಗಳಲ್ಲಿ ಪುತ್ಥಳಿಗೆ ವಿರೋಧ ಮಾಡುತ್ತಿದ್ದಾರೆ ಅಂತ ನನ್ನ ಹೆಸರು ಪ್ರಸ್ತಾಪ ಮಾಡಿದ್ದೀರಿ. ಹಾಗಿದ್ದರೇ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಿ. ನಾನು ಉಟ್ಟ ಬಟ್ಟೆಯಲ್ಲಿ ನೀವು ಹೇಳಿದ ಸಮಯಕ್ಕೆ ಬರುತ್ತೇನೆ ಅಂತ ಮಾಜಿ ಶಾಸಕ ವೀರಣ್ಣ ಚರಂತಿಮಠಗೆ ಪಂಥಾಹ್ವಾನ ನೀಡಿದರು.
ಈ ಹಿಂದಿನ ಐದು ವರ್ಷ ಅಽಕಾರದಲ್ಲಿ ಇದ್ದಾಗ ಆರ್‌ಎಸ್‌ಎಸ್ ಮೆರವಣಿಗೆ ವೇಳೆ ಪರಿವಾರದ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಕೇಸ ದಾಖಲಿಸಿದ್ದು, ಕೆಂಪು ರೋಡ ಹನುಮಂತ ದೇವರ ಕಟ್ಟಡಕ್ಕೆ ಅಡ್ಡಿಸುವುದು ತಮ್ಮಿಂದ್ದ ಆಗಿದೆ. ತಾವು ಹಿಂದು ವಿರೋಽ ಚಟುವಟಿಕೆ ಮಾಡಿದ್ದು ಮರೆತಿದ್ದೀರಾ? ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಇನ್ನು ಪುತ್ಥಳಿ ಸ್ಥಾಪನೆ ವಿಷಯದಲ್ಲಿ ಜಿಲ್ಲಾಡಳಿತ, ಪೊಲೀಸರ ಕ್ರಮ ಖಂಡನೀಯ. ಅಽವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಪಕ್ಷದ ವರಿಷ್ಠರಿಗೂ ಈ ಬಗ್ಗೆ ವರದಿ ನೀಡುತ್ತೇನೆ. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿ ಪುತ್ಥಳಿ ಸ್ಥಾಪನೆಗೆ ಮನವಿ ಮಾಡುತ್ತೇನೆ ಎಂದ ಅವರು, ಪುತ್ಥಳಿ ವಿಚಾರದಲ್ಲಿ ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು ಎಂದು ಕೋರಿದರು.
ಡಾ.ಶೇಖರ ಮಾನೆ ಮಾತನಾಡಿ, ಪುತ್ಥಳಿ ಸ್ಥಾಪನೆಗೆ ನಾವು ವಿರೋಧ ಮಾಡುತ್ತಿದ್ದೇವೆ ಅಂತ ಹೇಳಿರುವುದು ಶುದ್ಧ ಸುಳ್ಳು. ಎಂದಿಗೂ ವಿರೋಧ ಮಾಡಿಲ್ಲ. ಪುತ್ಥಳಿ ವಿಶ್ವದ ಯಾವುದೇ ಮೂಲೆಯಲ್ಲಿ ಸ್ಥಾಪನೆಯಾದರು ಸಂಭ್ರಮ, ಸಂತೋಷ ಪಡುತ್ತೇವೆ. ಟಾರ್ಗೇಟ್ ಮಾಡಿ ವಿವಾದದಲ್ಲಿ ಸಿಲುಕಿರುವುದು ತರವಲ್ಲ. ಪೊಲೀಸರಿಗೆ ಕರೆ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ ಅಂತ ಆರೋಪ ಮಾಡಿರುವವರು ನಗರದ ವಲ್ಲಭಬಾಯಿ ಚೌಕ್‌ಗೆ ಬಂದು ಸಾಬೀತ ಪಡಿಸಬೇಕು. ಹಿಂದು ಸಂಘಟನೆಗಳು ನೀಡುವ ಶಿಕ್ಷೆಗೆ ನಾನು ಸಿದ್ದನಿದ್ದೇನೆ. ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರುವದಿಲ್ಲ. ರಾಜ್ಯದಲ್ಲಿ ನಮ್ಮದೆ ಬಿಜೆಪಿ ಸರ್ಕಾರ, ತಾವೇ ಶಾಸಕರಾಗಿ ಇದ್ದೀರಿ ಅಂದು ಪರವಾಣಿಗೆ ಪಡೆದುಕೊಳ್ಳದೇ ಇಂದು ನಾಟಕವಾಡುವುದು ದುರಂತ ಸಂಗತಿ ಎಂದು ದೂರಿದರು.
ರಾತ್ರೋರಾತ್ರಿ ಪ್ಲಾಸ್ಟಿಕ್ ಪುತ್ಥಳಿ ಸ್ಥಾಪಿಸಿ ಯಾರೋ ಇಟ್ಟಿದ್ದಾರೆ ಅಂತ ಹೇಳುವುದು ಸರಿಯಲ್ಲ. ಧೈರ್ಯದಿಂದ ನಾವೇ ಇಟ್ಟಿದ್ದೇವೆ ಹೇಳಬೇಕು. ಅದು ಬಿಟ್ಟು ಇನ್ನೊಬ್ಬರ ಮೇಲೆ ಸುಖಾ ಸುಮ್ಮನೇ ಗೂಬೆ ಕೂರಿಸುವುದು ಸರಿ ಅಲ್ಲ. ಸತ್ಯಾಂಶ ಬೆಳಕಿಗೆ ಬರಬೇಕು ಅಂತ ಹೇಳಿಕೆ ನೀಡುತ್ತೇವೆ ಎಂದು ಹೇಳಿದರು.