ಮಾಜಿ ಶಾಸಕ ಚರಂತಿಮಠ ಕ್ಷಮೆಯಾಚಿಸಬೇಕು

bkt-29-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗಣಪತಿಸಾ ದಾನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬಾಗಲಕೋಟೆ: ಈಚೆಗೆ ಬಾಗಲಕೋಟೆ ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಶೇಖರ ಮಾನೆ ಅವರಿಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅಪಮಾನ ಮಾಡಿದ್ದು ಖಂಡನೀಯ. ಒಂದು ವಾರದಲ್ಲಿ ಕ್ಷತ್ರಿಯ ಸಮಾಜಕ್ಕೆ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದಲ್ಲಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕ್ಷತ್ರಿಯ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗಣಪತಿಸಾ ದಾನಿ ಆಗ್ರಹಿಸಿದರು.

ಛತ್ರಿಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ರಾಜಕೀಯಕ್ಕೆ ಬಳಸಿಕೊಳ್ಳುವಂತಹ ರಾಜಕಾರಣಿಗಳಿಂದ ಹಿಂದುತ್ವದ ಪಾಠ ಕಲಿಯುವ ಅವಶ್ಯಕತೆ ನಮಗೆ ಇಲ್ಲ. ನಿಮ್ಮನ್ನು ಮತ್ತು ನಿಮ್ಮ ಪಕ್ಷಕ್ಕೆ ಬೆಂಬಲ ನೀಡಿದ ಕ್ಷತ್ರಿಯ ಸಮಾಜದ ಮುಖಂಡರಿಗೆ ಈ ರೀತಿ ಅವಮಾನಿಸಿದ್ದು ಸರಿಯಲ್ಲ. ಸಮಾಜದ ಮುಖಂಡ ಡಾ.ಶೇಖರ ಮಾನೆ ಅವರಿಗೆ ಏಕವಚನದಲ್ಲಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಯಾವುದೇ ಪಕ್ಷ ಇರಲಿ ಯಾವುದೇ ರಾಜಕಾರಣಿ ಇರಲಿ ಸಮಾಜದ ಮೇಲೆ ಸಮಾಜದ ಮುಖಂಡರ ಮೇಲೆ ದಬ್ಬಾಳಿಕೆ ಮಾಡಿದರೆ ಒಕ್ಕೂಟವು ತಕ್ಕ ಉತ್ತರ ಕೊಡಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.

ಡಾ.ಮಾನೆ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ವಿದ್ದರೆ ಅದನ್ನು ಪಕ್ಷದ ಆಂತರಿಕ ವೇದಿಕೆಯಲ್ಲಿ ಬಗೆ ಹರಿಸಿಕೊಳ್ಳಬೇಕಿತ್ತು. ಈ ರೀತಿ ಸಾರ್ವಜನಿಕವಾಗಿ ಅವಮಾನ ಮಾಡಿರುವುದು ಸಹಿಸಲು ಸಾಧ್ಯವಿಲ್ಲ. ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾನೆಗೆ ನೀವು ಏಕಪಕ್ಷಿಯವಾಗಿ ಮಾಡಲು ಹೊರಟಿರುವುದು ಸರಿಯಲ್ಲ. ಬಾಗಲಕೋಟೆ ಹಬ್ಬದ ರೀತಿಯಲ್ಲಿ ಸಂಭ್ರಮ ದಿಂದ ಮೆರವಣಿಗೆ ಮಾಡಿ ಕೊಂಡು ಹೋಗಿ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪಿಸಬೇಕು. ಛತ್ರಪತಿ ಶಿವಾಜಿ ಮಹಾರಾಜರು ಸಮಸ್ತ ಹಿಂದೂ ಸಮಾಜದ ನಾಯಕ. ಅವರ ಮೂರ್ತಿ ಕದ್ದು-ಮುಚ್ಚಿ ಸ್ಥಾಪನೆ ಮಾಡುವ ಅಗತ್ಯವಿಲ್ಲ ಹರಿಹಾಯ್ದರು.

ಶಿವಾಜಿ ಮಹಾರಾಜರ ಮೂರ್ತಿ ಕೂಡಿಸಲಿಕ್ಕೆ ಮಾನೆ ಅವರು ವಿರೋಽಸಿದರು ಎಂದು ಸುಳ್ಳು ಆಪಾದನೆ ಮಾಡಲಾಗಿದೆ. ಪಕ್ಷದ ಸಭೆಯಲ್ಲಿ ಅವರಿಗೆ ಮಾತನಾಡಲು ಅವಕಾಶ ಕೊಡದೇ ಸಭೆಯಿಂದ ನಿರ್ಗಮಿಸುವಂತೆ ಅವಹೇನಕಾರಿಯಾಗಿ ನಡೆದುಕೊಂಡಿದ್ದೀರಿ. ನಿಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಮಾಜದ ಮುಖಂಡರ ಮೇಲೆ ಸುಳ್ಳು ಅಪಾದನೆ ಮಾಡಿ ಜನರನ್ನು ದಾರಿತಪ್ಪಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಯೋಜಿತ ಅಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ಬಾಗಲಕೋಟೆಯಲ್ಲಿ ಮರಾಠ ಸಮಾಜ ಎರಡು ಭಾಗ ಮಾಡಿದ್ದು ಮಾಜಿ ಶಾಸಕ ವೀರಣ್ಣ ಚರಂತಿಮಠ. ಎರಡು ಶಿವಾಜಿ ಜಯಂತಿ ಆಚರಣೆ ಆಗುವಂತೆ ಮಾಡುವದರಲ್ಲಿ ನಿಮ್ಮ ಪಾತ್ರವಿದೆ. ಸಮಸ್ತ ಹಿಂದು ಸಮಾಜಕ್ಕಿಂತ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವುದು ತರವಲ್ಲ ಎಂದು ನೀವೇ ಇದೆಲ್ಲ ನಿಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ನೀವು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷತ್ರಿಯ ಸಮಾಜದ ಮುಖಂಡರಾದ ವಿರುಪಾಕ್ಷ ಅಮೃತಕರ, ಅಶೋಕ ಘಾಟಗೆ, ಆನಂದರಾವ ಮಾನೆ, ಕೃಷ್ಣಾ ಗೌಡರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net