ಮಾಜಿ ಯೋಧನ ಸಮಸ್ಯೆ ಆಲಿಸಿ

bkt-5-5
ಬಾಗಲಕೋಟೆ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಾಜಿ ಸೈನಿಕ ಸಂಘದ ವಾರ್ಷಿಕ ಸಮಾವೇಶದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
Published on

ಬಾಗಲಕೋಟೆ: ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರ ಸಮಸ್ಯೆಗಳನ್ನು ಸರ್ಕಾರಗಳು ಆಲಿಸುತ್ತಿಲ್ಲ. ಇದರಿಂದ ಬೆಟ್ಟದಷ್ಟು ತೊಂದರೆಯಾಗಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಆರ್.ಪಿ.ಯಡಹಳ್ಳಿ ಹೇಳಿದರು.
ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಾಜಿ ಸೈನಿಕ ಸಂಘದ ವಾರ್ಷಿಕ ಸಮಾವೇಶದಲ್ಲಿ ಮಾಜಿ ಸೈನಿಕರ ಕುಂದುಕೊರತೆಗಳನ್ನು ನಿವಾರಿಸುವಂತೆ ತಹಸೀಲ್ದಾರ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲೇ ಮಾಜಿ ಯೋಧರನ್ನು ಹೊಂದಿದ ಎರಡನೇ ದೊಡ್ಡ ಜಿಲ್ಲೆ ಬಾಗಲಕೋಟೆ. ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಸಂಬಂಽಸಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳು ನಿವಾರಣೆಗೊಂಡಿಲ್ಲ. ಕೂಡಲೇ ನಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಮನವಿ ಮಾಡಿದರು.
ಕೋವಿಡ್ ಪರಿಣಾಮ ಕಳೆದ ಮೂರು ವರ್ಷಗಳಿಂದ ಮಾಜಿ ಯೋಧರ ಕುಂದುಕೊರತೆ ಆಲಿಸುವ ತ್ರೈಮಾಸಿಕ ಸಭೆಯೂ ನಡೆದಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು. ಮಾಜಿ ಸೈನಿಕರಿಗೆ ಇಸಿಎಚ್‌ಎಸ್ ಅಡಿಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ. ಆದರೆ ಮಾಜಿ ಯೋಧರು ಸೇರಿದಂತೆ ಅವರ ಕುಟುಂಬದ ೧೪ ಸಾವಿರ ಅವಲಂಬಿತರು ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಂಚಿರತಾಗಿದ್ದಾರೆ, ಕೂಡಲೇ ಯೋಜನೆ ಜಾರಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿನ ಕೃಷಿ ಭೂಮಿಯನ್ನು ಹಲವು ಜಿಲ್ಲೆಗಳಲ್ಲಿ ಮಾಜಿ ಸೈನಿಕರಿಗೆ ಒದಗಿಸಲಾಗಿದ್ದು, ಜೀವನೋಪಾಯಕ್ಕಾಗಿ ಬಾಗಲಕೋಟೆ ಜಿಲ್ಲೆಯಲ್ಲೂ ಈ ಯೋಜನೆಯನ್ನು ಆರಂಭಿಸಬೇಕು. ಬಿಟಿಡಿಎ ವ್ಯಾಪ್ತಿಯಲ್ಲಿ ಮಾಜಿ ಸೈನಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಮಾಡಬೇಕು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಹನ್ನೆರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಕೂಡಲೇ ನೇಮಕಾತಿಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ತಿಂಗಳು ಸಿಎಸ್‌ಡಿ ಕ್ಯಾಂಟಿನ್ ಸೌಲಭ್ಯವಿದ್ದರೂ ಮಾಜಿ ಸೈನಿಕರ ಕುಟುಂಬಗಳಿಗೆ ಸಮಯಕ್ಕೆ ಸರಿಯಾಗಿ ಸಾಮಗ್ರಿಗಳು ಸಿಗುತ್ತಿಲ್ಲ. ಕೆಡಿಪಿ ಸಭೆಯಲ್ಲೂ ಮಾಜಿ ಯೋಧರ ಸಮಸ್ಯೆಗಳ ಕುರಿತಾಗಿ ಬೆಳಕು ಚೆಲ್ಲುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಬಾಗಲಕೋಟೆ ತಹಸೀಲ್ದಾರ ವಿನಯಕುಮಾರ ಪಾಟೀಲ, ವಾಣಿಜ್ಯ ತೆರಿಗೆ ಇಲಾಖೆ ಉಪಾಯುಕ್ತ ಶಿವಾನಂದ ಆಲಬಾಳ, ನಿವೃತ್ತ ಹಿರಿಯ ಸೇನಾಧಿಕಾರಿ ಮೇಜರ್ ಎ.ಎಸ್.ನಿಂಬಾಳಕರ ಉಪಸ್ಥಿತರಿದ್ದರು, ಸಂಘದ ಕಾರ್ಯದರ್ಶಿ ಎಚ್.ಆರ್.ಕುಲಕರ್ಣಿ ಸ್ವಾಗತಿಸಿದರು. ಬಸವರಾಜ ಮಂಡಿವಾಳರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net