ಮಾ.೨೬ ರಂದು ದಾಸಿಮಯ್ಯ ಜಯಂತಿ ಆಚರಣೆ

bkt-16-2
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅಧ್ಯಕ್ಷತೆಯಲ್ಲಿ ದಾಸಿಮಯ್ಯ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆ ಜರುಗಿತು
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಾ.೨೬ ರಂದು ರಾಜ್ಯ ಮಟ್ಟದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ದಾಸಿಮಯ್ಯ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಮಟ್ಟದ ಕಾರ್ಯಕ್ರಮ ಆಗಿರುವದರಿಂದ ವಿಶೇಷವಾಗಿ ಆಚರಿಸಬೇಕಾಗಿದೆ. ವೇದಿಕೆ ಕಾರ್ಯಕ್ರಮವನ್ನು ನವನಗರದ ಕಲಾಭವನದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಪರ ಜಿಲ್ಲಾಽಕಾರಿಗಳು ಮನವಿ ಮಾಡಿಕೊಂಡರು.
ಅಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾಡಳಿತ ಭವನದಿಂದ ಕಲಾಭವನದವರೆಗೆ ದೇವರ ದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ಮೆರವಣಿಗೆಯಲ್ಲಿ ಬೆಳ್ಳಿಯ ರಥ, ವಿವಿಧ ಜಾನಪದ ಕಲಾತಂಡಗಳನ್ನು ಆಹ್ವಾನಿಸಲು ತಿಳಿಸಲಾಯಿತು. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲಾಗುತ್ತಿದೆ. ಸಮುದಾಯದಲ್ಲಿ ಪಂಗಡಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರತಿಯೊಂದು ಪಂಗಡಗಳ ಸ್ವಾಮೀಜಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಸಮುದಾಯ ಬಾಂಧವರು ಸಭೆಗೆ ತಿಳಿಸಿದಾಗ ಸ್ವಾಮೀಜಿಗಳನ್ನು ಆಹ್ವಾನಿಸಲು ತಿಳಿಸಲಾಯಿತು.
ಕಲಾಭವನದಲ್ಲಿ ಬೆಳಗ್ಗೆ ೧೧.೩೦ಕ್ಕೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ವೇದಿಕೆ ಅಲಂಕಾರ ಮಾಡಲಾಗುತ್ತಿದೆ. ಸರ್ಕಾರಿ ನೀಡಿರುವ ಅನುದಾನದಲ್ಲಿಯೇ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ, ಡಿವೈಎಸ್‌ಪಿ ಪ್ರಶಾಂತ ಮನೊಳ್ಳಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎಂ.ಜಿ.ಕೊನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸೇರಿದಂತೆ ಸಮುದಾಯದ ಮುಖಂಡರಾದ ಶ್ರೀನಿವಾಸ ಬಳ್ಳಾರಿ, ಮಲ್ಲಿಕಾರ್ಜುನ ಸಿಂಹಾಸನ, ಆರ್.ಜೆ.ರಾಮದುರ್ಗ, ವಿಷ್ಣು ಗೌಡರ, ಮನೋಹರ ರಕ್ಕಸಗಿ, ರಾಜು ಜವಳಿ, ಸಿದ್ದಣ್ಣ ಹಲಕಾಟಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net