

ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.೧೪ ರಂದು ಜಿಲ್ಲೆಗೆ ಆಗಮಿಸಲಿದ್ದು, ಹುನಗುಂದ, ಬಾಗಲಕೋಟೆ ಮತ್ತು ಮುಧೋಳ ಮತಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮದ ಕುರಿತು ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾ.೧೪ ರಂದು ಮಧ್ಯಾಹ್ನ ೨ ಗಂಟೆಗೆ ಹುನಗುಂದ ಮತಕ್ಷೇತ್ರದಲ್ಲಿ, ಸಂಜೆ ೪ ಗಂಟೆಗೆ ಬಾಗಲಕೋಟೆ ಮತಕ್ಷೇತ್ರ ಹಾಗೂ ಸಂಜೆ ೬ ಗಂಟೆಗೆ ಮುಧೋಳ ಮತಕ್ಷೇತ್ರ ಸೇರಿದಂತೆ ಮೂರು ಕಡೆಗಳಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯಲಿದೆ ಎಂದರು.
ಮೂರು ಮತಕ್ಷೇತ್ರಗಳಲ್ಲಿ ಭೂಮಿ ಪೂಜೆ ಮತ್ತು ಉದ್ಘಾಟನೆಗೆ ಸಿದ್ದವಿರುವ ಎಲ್ಲ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಶುಕ್ರವಾರ ಮಧ್ಯಾಹ್ನದ ಒಳಗಡೆ ಎಲ್ಲ ಇಲಾಖೆಯವರು ಮಾಹಿತಿಗಳ ಪಟ್ಟಿ ಮಾಡಿ ನೀಡಬೇಕು. ಮೂರು ಕಡೆಗಳಲ್ಲಿ ಕಾರ್ಯಕ್ರಮ ನಡೆಯಲಿರುವದರಿಂದ ಮತಕ್ಷೇತ್ರವಾರು ಪ್ರತ್ಯೇಕವಾಗಿ ಕಾಮಗಾರಿಗಳ ಮಾಹಿತಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಇದರ ಜೊತೆಗೆ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮವು ಸಹ ಜರುಗಲಿದ್ದು, ಮತಕ್ಷೇತ್ರವಾರು ಎಲ್ಲ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡು ನೀಡಬೇಕು. ಮೂರು ಮತಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯುವದರಿಂದ ಆಯಾ ಮತಕ್ಷೇತ್ರದಲ್ಲಿ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಬೇಕು. ಈ ಮೂರು ಮತಕ್ಷೇತ್ರ ಬಿಟ್ಟು ಉಳಿದ ಮತಕ್ಷೇತ್ರಗಳ ಫಲಾನುಭವಿಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಸಮೀಪವಿರುವ ಇತರೆ ಮತಕ್ಷೇತ್ರದ ಫಲಾನುಭವಿಗಳನ್ನು ಕರೆತರುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಽಕಾರಿ ರಮೇಶ ಕಳಸದ, ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕುಲಗೌಡ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ತಹಸೀಲ್ದಾರರು ಉಪಸ್ಥಿತರಿದ್ದರು.