

ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬಕ್ಕೆ ಮಾ.೧೨ ರಂದು ವೈಭವ ಪೂರಿತವಾಗಿ ಚಾಲನೆ ನೀಡಲಾಗುವುದು ಎಂದು ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೭ ಗಂಟೆಗೆ ನಗರದ ವಲ್ಲಭಬಾಯಿ ಚೌಕದಲ್ಲಿ ಹೋಳಿ ಉತ್ಸವ ಕಾರ್ಯಕ್ರಮಕ್ಕೆ ಉದ್ಯಮಿ ಸಂತೋಷ ಬಿ. ಹೊಕ್ರಾಣಿ ಚಾಲನೆ ನೀಡಲಿದ್ದಾರೆ. ಕಳಕಪ್ಪ ಬಾದೋಡಗಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ, ಪತ್ರಕರ್ತರಾದ ರವಿರಾಜ್ ಗಲಗಲಿ, ಬಸವೇಶ್ವರ ಸಹಕಾರಿ ಬ್ಯಾಂಕನ ನಿರ್ದೇಶಕ ಶರಣಪ್ಪ ಹೆರಕಲ್, ಎನ್.ಆರ್.ಕುಲಕರ್ಣಿ ಆಗಮಿಸಲಿದ್ದಾರೆ. ನಂತರ ೫ ಓಣಿಗಳು ಹಾಗೂ ವಿದ್ಯಾಗಿರಿ, ನವನಗರ ಭಾಗದ ಹಲಗೆ ಮೇಳದ ಪ್ರದರ್ಶನಗಳು ನಡೆಯಲಿವೆ ಎಂದರು.
ವೇದಿಕೆ ಕಾರ್ಯಕ್ರಮದ ಬಳಿಕ ಮಧ್ಯರಾತ್ರಿ ಕಿಲ್ಲಾ ಕಾಮದಹನ ನಡೆಯಲಿದ್ದು, ಮಾ.೧೩ ರಂದು ಹಳಪೇಟ, ಜೈನಪೇಟ, ಹೊಸಪೇಟ, ವೆಂಕಟಪೇಟ, ವಿದ್ಯಾಗಿರಿ, ನವನಗರ ಭಾಗದಲ್ಲಿ ಬೆಳಗ್ಗೆ ೯ ಗಂಟೆಯಿAದ ರಾತ್ರಿ ೯ ಗಂಟೆ ವರೆಗೆ ಕಾಮದಹನ ಜರುಗಲಿದೆ. ಈ ಸಂದರ್ಭದಲ್ಲಿ ತುರಾಯಿ ಹಲಗೆ ನಿನಾದ, ಶಹನಾಯಿ ಸ್ವರ ಮೊಳಗಲಿದೆ. ಗೌರವ ಪೂರ್ವಕ ನಿಶಾನೆ ಸಂಚರಿಸಿ ಕಾಮದಹನ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಆಚರಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸಂಜೀವ ವಾಡಕರ ಮಾತನಾಡಿ, ಮಾ.೧೪ ರಂದು ವಿದ್ಯಾಗಿರಿ, ನವನಗರ ಹಾಗೂ ಕಿಲ್ಲಾ ಓಣಿಯ ಬಣ್ಣದಾಟ, ಮಾ.೧೫ ರಂದು ಹಳಪೇಟ, ಜೈನಪೇಟ, ವೆಂಕಟಪೇಟ ಓಣಿಯ ಬಣ್ಣದಾಟ, ಮಾ.೧೬ ರಂದು ಹೊಸಪೇಟ ಓಣಿಯ ಬಣ್ಣದಾಟ ನಡೆಯಲಿದ್ದು, ಮಾ.೧೩ ರಂದು ರಾತ್ರಿ ಕಿಲ್ಲಾ ಓಣಿಯ ಸೋಗಿನ ಬಂಡಿಗಳ ಪ್ರದರ್ಶನ, ಮಾ.೧೪ ರಂದು ಹಳಪೇಟ ಓಣಿ ಸೋಗು, ಮಾ.೧೫ ರಂದು ಹೊಸಪೇಟ ಓಣಿಯ ಸೋಗು, ಮಾ.೧೬ ರಂದು ಜೈನಪೇಟ ಓಣಿಯ ಸೋಗು, ಮಾ.೧೭ ರಂದು ವಿದ್ಯಾಗಿರಿ, ನವನಗರ ಹಾಗೂ ವೆಂಕಟಪೇಟೆ ಓಣಿಯ ಸೋಗಿನ ಪ್ರದರ್ಶನಗಳು ಜರುಗಲಿವೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ ಮಾತನಾಡಿ, ಬಾಗಲಕೋಟೆ ಐತಿಹಾಸಿಕ ಹೋಳಿ ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹೋಳಿ ಅಸ್ಪÈಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ನಡೆಯುತ್ತದೆ. ಶತಮಾನಗಳ ಇತಿಹಾಸ ಇದಕ್ಕೆ ಇದೆ. ಬಾಗಲಕೋಟೆ ಹೋಳಿ ಹಬ್ಬದ ಸಂದರ್ಭದಲ್ಲಿ ಯಾರು ಪ್ರವಾಸಕ್ಕೆ ತೆರಳಬಾರದು. ಊರಲ್ಲಿ ಇದ್ದು ಆಚರಿಸಬೇಕು. ಯಾವುದೇ ಕಾರಣಕ್ಕೂ ಹೋಳಿ ಗತ ವೈಭವ ಮರೆಯಾಗದಂತೆ ಜಾಗೃತಿ ವಹಿಸುವಂತೆ ನಮ್ಮೆಲ್ಲರ ಜವಾಬ್ದಾರಿ ಎಂದು ಮನವಿ ಮಾಡಿದರು.
ಮುಖಂಡ ರವಿ ಕುಮಟಗಿ, ಪ್ರತಿ ವರ್ಷದಂತೆ ಈ ವರ್ಷವು ಬಾಗಲಕೋಟೆ ಹಬ್ಬ ತಂಡದಿAದ ರೇನ್ ಡ್ಯಾನ್ಸ್ ನಡೆಯಲಿದೆ. ಬಸವೇಶ್ವರ ವೃತ್ತದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ. ನಮ್ಮ ಆಚರಣೆ, ಪರಂಪರೆಗಳು ಉಳಿಯಬೇಕು, ಬೆಳೆಯಬೇಕು ಎನ್ನುವುದು ನಮ್ಮೆಲ್ಲರ ಆಶಯ ಎಂದರು.