ಪಾಂಡವಪುರ: ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಾರ್ಚ್ 8ರಂದು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.
ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಪ್ರತಿವರ್ಷ ನ್ಯಾಯಾಲದಲ್ಲಿ ಬಾಕಿ ಇರುವ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಿಲು ಲೋಕ ಅದಾಲತ್ ನಡೆಸಲಾಗುತ್ತಿದೆ. ಅದರಂತೆ, ಮಾ.8ರಂದು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಕ್ಷಿದಾರರು, ಸಾರ್ವಜನಿಕರು ಇದರ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಸೂಕ್ತವಾದಂತಹ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಪ್ರಸ್ತುತ ನ್ಯಾಯಾಲಯದಲ್ಲಿ 145 ಎಂವಿಸಿ ಪ್ರಕರಣಗಳು, 17 ಎಂಎಂಆರ್‌ಡಿ ಪ್ರಕರಣ, 12 ಎಲ್‌ವಿಸಿ ಪ್ರಕರಣ, 115 ವಿಭಾಗ ದಾವೆ, 125 ಇತರೆ ಸಿವಿಲ್ ಪ್ರಕರಣ, 185 ನಿರ್ದಿಷ್ಟ ಪರಿಹಾರಕ್ಕಾಗಿ ದಾವೆ ಪ್ರಕರಣ, 25 ಕ್ರಿಮಿನಲ್ ಪ್ರಕರಣ, 310 ಎನ್‌ಐ ಆಕ್ಟ್ ಪ್ರಕರಣಗಳನ್ನು ಸೇರಿದಂತೆ ಒಟ್ಟು 934 ಪ್ರಕರಣಗಳನ್ನು ರಾಜಿ ಆಗಲು ಅವಕಾಶವಿರುವ ಪ್ರಕರಣಗಳು ಎಂದು ಗುರುತಿಸಲಾಗಿದೆ. ಪಂಚಾಯಿತಿಗಳು, ಪುರಸಭೆಗಳಲ್ಲಿ ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್ ಬಿಲ್ ಹಾಗೂ ಸಣ್ಣಪುಟ್ಟ ಬ್ಯಾಂಕ್ ಸಾಲ ವಸೂಲಾತಿ, ಚೆಕ್‌ಬೌನ್ಸ್ ಪ್ರಕರಣಗಳನ್ನು ಸಹ ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಕಳೆದ ಅದಾಲತ್‌ನಲ್ಲಿ ಗುರುತಿಸಲಾಗಿದ್ದ 6,908 ಪ್ರಕರಣಗಳ ಪೈಕಿ 233 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಕೋರ್ಟ್‌ನಲ್ಲಿ ದಾವೆ ಹಾಕದ 5186 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲಾಗಿದೆ ಎಂದರು.
ಜನತಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳ ಆರೋಪಿಯ ಹಾಜರಾತಿ ಅವಶ್ಯಕತೆ ಇರುವುದಿಲ್ಲ. ದೂರುದಾರರು ಬಂದು ರಾಜಿ ಮಾಡಿಕೊಳ್ಳುತ್ತೇವೆ ಎಂದರೆ ಆರೋಪಿ ಗೈರಿನಲ್ಲಿ ರಾಜಿ ಮಾಡಲಾಗುವುದು. ಅದಾಲತ್‌ನಲ್ಲಿ ಭಾಗವಹಿಸುವ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವ ಕೆಲಸ ಮಾಡುವುದಿಲ್ಲ. ಸಾರ್ವಜನಿಕರು, ಕಕ್ಷಿದಾರರು ಯಾವುದೇ ಆತಂಕವಿಲ್ಲದೆ ಇದರಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ಕಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ಪಾರ್ವತಮ್ಮ, ಕೆ.ಎಸ್.ಕಿಶೋರ್, ಎಂ.ಪದ್ಮಾ ಇದ್ದರು.