

ಸವಣೂರ: ಮಹಿಳೆಯರ ಬಗ್ಗೆ ಪೂಜ್ಯ ಮನೋಭಾನೆ ಹೊಂದಿದ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ನೀಡಬೇಕು ಎಂದು ಮೊಟ್ಟ ಮೊದಲಿಗೆ ಸಾರಿದವರು ಬಸವಣ್ಣವರು ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ ಹೇಳಿದರು.
ಜೆಸಿಐ ನಮ್ಮ ಸವಣೂರು, ಮಹಿಳಾ ಸಮಾಖ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಭಾನುವಾರ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಜಗದ್ಗುರು ಫಕೀರೇಶ್ವರ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಒಂದು ದಿನದ ಗೃಹ ಉದ್ಯೋಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ದಿನ ಆಚರಣೆ ಸಮಾರಂಭದಲ್ಲಿ ಮಾತ್ರ ಮಹಿಳೆಯರನ್ನು ಹೊಗಳುವ ಕಾರ್ಯ ಆಗಬಾರದು. ವಂಚನೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯನ್ನು ರಕ್ಷಿಸುವ ಕಾರ್ಯ ಆಗಬೇಕಿದೆ. ಆದ್ದರಿಂದ, ಮಹಿಳೆಯರ ಸಂಘಟನೆ ಇನ್ನಷ್ಟು ಬಲಿಷ್ಠಗೊಳ್ಳಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದು ಪರಸ್ಪರ ಸಹಕಾರದೊಂದಿಗೆ ಉತ್ತಮ ಸಾಧನೆಗೆ ಮುಂದಾಗಬೇಕು ಎಂದರು.
ಸಿಡಿಪಿಒ ಅಣ್ಣಪ್ಪ ಹೆಗಡೆ ಹಾಗೂ ಅಪ್ಪು ಬಿಜಾಪೂರ ಅವರು ಪ್ರಾತ್ಯಕ್ಷಿಕೆ ಮೂಲಕ ಕಲರ್ ಪೇನ್ಸಿಲ್ ತಯಾರಿಕೆ ಸೇರಿ ವಿವಿಧ ಗೃಹ ಉದ್ಯೋಗ ತರಬೇತಿ ನೀಡಿದರು. ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ವಿದ್ಯಾಧರ ಕುತನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಅರಗೋಳ ಜೆಸಿವಾಣಿ ಬೋಧಿಸಿದರು.
ತಾಪಂ ಸದಸ್ಯೆ ಭಾರತಿ ಕುಂಬಾರ, ಇಒ ಮುನಿಯಪ್ಪ ಪಿ., ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ಯುವ ಸಾಹಿತಿ ಚಿನ್ನೂ ರಾಗಿ, ಗ್ರಾಪಂ ಸದಸ್ಯ ಚನ್ನಮ್ಮ ಸವೂರ, ಅಂಗನವಾಡಿ ಮೇಲ್ವಿಚಾರಕಿ ಪ್ರಮಿಳಾ ಕೋಟೆ, ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ಗಣೇಶಗೌಡ ಪಾಟೀಲ, ಪರಶುರಾಮ ಹೊಳಲ, ಪ್ರಶಾಂತ ನಾವಳ್ಳಿ ಹಾಗೂ ಇತರರು ಪಾಲ್ಗೊಂಡಿದ್ದರು.
ಪಿಡಿಒ ವಿಜಯಲಕ್ಷ್ಮೀ ಗಣತಿ, ಮಹಿಳಾ ಸಮಾಖ್ಯ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸುನಂದಾ ಚಿನ್ನಾಪೂರ ಹಾಗೂ ಪತ್ರಕರ್ತ ಆನಂದ ಮತ್ತಿಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು.