

ಸಿದ್ಧಾಪುರ: ದಿನನಿತ್ಯ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರದ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಭದ್ರತೆ ನೀಡಬೇಕಾದ ಆಳುವ ಸರ್ಕಾರಗಳು ಕೈಕಟ್ಟಿ ಕುಳಿತಿವೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಆರೋಪಿಸಿದರು.
ನೆಲ್ಯಹುದಿಕೇರಿಯ ಕೋಫಿಯ ಸಭಾಂಗಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೊಡಗು ಜಿಲ್ಲಾ ಘಟಕದಿಂದ ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷವಾಕ್ಯದಡಿ ಭಾನುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ನಿರ್ಭೀತಿಯಿಂದ ಬದುಕಲು ಆರ್ಥಿಕ ಸ್ವಾವಲಂಬಿ ಬದುಕನ್ನು ಇಂದಿನ ಸರ್ಕಾರಗಳು ನೀಡುತ್ತಿಲ್ಲ. ಸರ್ಕಾರಗಳು ಮಹಿಳಾ ದಿನಾಚರಣೆಯನ್ನು ಯಾವುದೋ ನಾಲ್ಕು ಹೆಣ್ಣು ಮಕ್ಕಳಿಗೆ ಸನ್ಮಾನ ಮಾಡಿ ಸಬಲೀಕರಣ ಹೊಂದಿದ್ದಾರೆಂದು ಮಾತನಾಡುತ್ತಿವೆ. ಆದರೆ ಪ್ರತಿನಿತ್ಯ ಮಹಿಳೆ ಮೇಲೆ ದಬ್ಬಾಳಿಕೆ, ಶೋಷಣೆ, ಅತ್ಯಾಚಾರ, ದೌರ್ಜನ್ಯಗಳು ಇಂದಿಗೂ ಮುಂದುವರಿಯುತ್ತಲೇ ಇವೆ. ಅವುಗಳ ವಿರುದ್ಧ ಸರ್ಕಾರಗಳು ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಸಹ ಸಂಚಾಲಕಿ ಸುಜಾತಾ ಮಾತನಾಡಿ, ಮಹಿಳೆಯರು ಸಂಘಟಿತರಾದರೆ ಮಾತ್ರ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ನ್ಯಾಯ ಕೊಡಿಸಲು ಸಾಧ್ಯ ಎಂದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೊಡಗು ಜಿಲ್ಲಾ ಸಂಚಾಲಕಿ ಪದ್ಮಿನಿ, ಆದಿವಾಸಿ ಸಂಘಟನೆಯ ರಾಜ್ಯ ಮುಖಂಡರಾದ ಪ್ರೇಮಾ, ಅಂಗನವಾಡಿ ನೌಕರರಾದ ಸತ್ಯ, ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಜ್ಯೋತಿಕೃಷ್ಣ, ಗ್ರಾಪಂ ಮಾಜಿ ಸದಸ್ಯೆ ವಾರಿಜಾ ಮತ್ತಿತರರು ಹಾಜರಿದ್ದರು.