

ಕನಕಪುರ : ಮಹಿಳೆಯರು ಕುಟುಂಬದ ಶಕ್ತಿಯಾಗಿ ದೇಶದ ಆಸ್ತಿಯಾಗಿದ್ದಾರೆ, ಅವರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ರೂರಲ್ ಕಾಲೇಜಿನ ಆವರಣದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಮಹಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರಿಗೆ ಗೌರವ ತರುವ ಹಾಗೂ ಶಕ್ತಿ ತುಂಬವ ಕೆಲಸ ನಮ್ಮ ಸರ್ಕಾರ 5 ಗ್ಯಾರಂಟಿಗಳ ಮೂಲಕ ಮಾಡುತ್ತಿದೆ, ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾದರೆ ಆ ಕುಟುಂಬವೇ ಅಭಿವೃದ್ಧಿಯಾಗುತ್ತದೆ. ಆದರಿಂದ ದೇಶವೇ ಅಭಿವೃದ್ಧಿಯಾಗುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಕೆಲಸವನ್ನು ಕನಕಪುರ ತಾಲೂಕಿನಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಮಾಡುತ್ತಿದೆ ಎಂದು ಹೇಳಿದರು.
ನಾಲ್ಕು ಜನಕ್ಕೆ ಉಪಯೋಗ ಆಗುವ ರೀತಿಯಲ್ಲಿ ನಾವು ಬದುಕಬೇಕು. ಆ ಕೆಲಸವನ್ನು ಕನಕಾಂಬರಿ ಮಹಿಳಾ ಒಕ್ಕೂಟದ ಎಚ್.ಕೆ. ಶ್ರೀಕಂಠ ಮಾಡುತ್ತಿದ್ದಾರೆ, ಅದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು, ಸಾಮಾಜಿಕ ಕೆಲಸಗಳಿಗೆ ಬೆಂಬಲವಾಗಿ ನಿಂತು ಸಹಕರಿಸಬೇಕು ಎಂದರು.
ಕನಕಾಂಬರಿ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷ ಎಚ್.ಕೆ. ಶ್ರೀಕಂಠು ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರನ್ನು ಅವಲಂಬಿಸಿ ಬದುಕುವ ಸ್ಥಿತಿಯಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಇದು ಸಂಪೂರ್ಣ ಬದಲಾಗಿದ್ದು, ಜಲಾಂತರ್ಗಾಮಿಯಿಂದ ಅಂತರಿಕ್ಷದವರೆಗೆ ಮಹಿಳೆಯರು ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ಈಗ 7 ಸಾವಿರಕ್ಕೂ ಹೆಚ್ಚು ಮಹಿಳೆಯರು ಒಕ್ಕೂಟದಲ್ಲಿದ್ದಾರೆ. ವಾರ್ಷಿಕವಾಗಿ 15 ಕೋಟಿ ರೂ. ಸಾಲ ನೀಡುತ್ತಿದ್ದು, ಅದನ್ನು ಸಮರ್ಪಕವಾಗಿ ಕಟ್ಟಿದ್ದು, ಈಗ ಮಹಾಸಮ್ಮೇಳನ ಅಂಗವಾಗಿ ಬೃಹತ್ ಆರೋಗ್ಯ ಶಿಬಿರ, ಅಂಗವಿಕಲರಿಗೆ ಸವಲತ್ತು ವಿತರಣೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೊಲಿಗೆ ತರಬೇತಿ ಪಡೆದವರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡುತ್ತಿರುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ. ವಿಜಯದೇವ್, ನಗರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಮ್ಮ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕೆ.ಎನ್. ದಿಲೀಪ್, ಬಮುಲ್ ಅಧ್ಯಕ್ಷ ರಾಜಕುಮಾರ್, ಭವಾನಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ್, ಮುಖಂಡ ಡಿ.ಎಂ. ವಿಶ್ವನಾಥ್, ಆರ್‌ಇಎಸ್ ನಿರ್ದೇಶಕರಾದ ಎನ್.ಎಸ್. ರಾಮೇಗೌಡ, ಕೆ.ಬಿ. ನಾಗರಾಜು, ಸೂರ್ಯನಾರಾಯಣಗೌಡ, ಮಂಜುನಾಥ್, ಪುಟ್ಟಸ್ವಾಮಿ ಇದ್ದರು.
ತಾಲೂಕಿನ ಮತದಾರರು ಕೊಟ್ಟ ಶಕ್ತಿಯಿಂದ ಡಿ.ಕೆ. ಶಿವಕುಮಾರ್ ಅವರು ರಾಜ್ಯ, ರಾಷ್ಟ್ರ ನಾಯಕರಾಗಿ ಬೆಳೆದಿದ್ದಾರೆ. ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮೀ ಹಣವು ತಾಲೂಕಿನಲ್ಲಿ 70 ಸಾವಿರ ಮಹಿಳೆಯರಿಗೆ ಬರುತ್ತಿದೆ. ತಿಂಗಳಿಗೆ 140 ಕೋಟಿ ರೂ. ಸಂದಾಯವಾಗುತ್ತಿದೆ, ಇದೆಲ್ಲವೂ ನೀವು ಶಕ್ತಿ ಕೊಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಂದ ಸಾಧ್ಯವಾಯಿತು, ಕಾಂಗ್ರೆಸ್ ಸದಾ ಮಹಿಳೆಯರ ಪರವಾಗಿ ಇರುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ