ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ

hnp dipo
Published on

ಹೊಳೆನರಸೀಪುರ: ಕರ್ನಾಟಕ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಸರ್ಕಾರದ ಸೂಚನೆಯಂತೆ ಆಧಾರ ಕಾರ್ಡ್ ಅಥವಾ ಇತರ ಗುರುತಿನ ಚೀಟಿ ತೋರಿಸುವುದು ಅಗತ್ಯವಾಗಿದೆ ಎಂದು ತಹಸೀಲ್ದಾರ್ ವಿಶ್ವನಾಥ್ ಕೆ. ತಿಳಿಸಿದರು.


ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರ ಸಬಲೀಕರಣ ಹಾಗೂ ಶೈಕ್ಷಣಿಕ ಪ್ರಗತಿಗೆ ಈ ಯೋಜನೆ ಸಹಕಾರಿಯಾಗಿದ್ದು, ಸೌಲಭ್ಯದ ಸದುಪಯೋಗ ಪಡಿಸಿಕೊಂಡು ನಿಶ್ಚಿಂತೆ ಹಾಗೂ ಸ್ವಾಭಿಮಾನದಿಂದ ಬದುಕಬಹುದಾಗಿದೆ ಎಂದರು.


ರಾಜ್ಯ ಸರ್ಕಾರದ ಈ ಯೋಜನೆಯಿಂದ ಜಿಲ್ಲಾ ಕೇಂದ್ರದ ಕಾರ್ಖಾನೆಗಳಿಗೆ ತೆರಳುವ ಕಾರ್ಮಿಕರಿಗೆ ಬಹಳ ಉಪಯೋಗವಾಗಲಿದ್ದು, ಅವರು ಕೆಲಸ ಕಾರ್ಯಗಳಿಗೆ ತೆರಳಲು ಅಗತ್ಯ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡಿದಲ್ಲಿ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಹಾಸನಕ್ಕೆ ತೆರಳುವ ವೇಗದೂತ ಹಾಗೂ ಗ್ರಾಮೀಣ ಸಾರಿಗೆ ಬಸ್‌ಗಳಿಗೆ ತಹಸೀಲ್ದಾರ್ ಕೆ.ವಿಶ್ವನಾಥ್ ಹಸಿರು ನಿಶಾನೆ ತೋರಿದರು. ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಪಾಪನಾಯಕ್ ಎಎಸ್‌ಐ ರಂಗಸ್ವಾಮಿ, ಲೆಕ್ಕಾಧಿಕಾರಿ ರವಿಕುಮಾರ್, ಉಗ್ರಾಣ ಮೇಲ್ವಿಚಾರಕ ರಿಷಬ್ ನವಾಜ್, ಶ್ರೀಧರ್, ವಾಹನ ಚಾಲಕರಾದ ರಮೇಶ್, ಪ್ರಕಾಶ್, ನಿರ್ವಾಹಕರಾದ ಕುಮಾರ್ ಹಾಗೂ ಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net