ಮಹಿಳೆಯ ಬೀಕರ ಕೊಲೆ..!

BKT-26-11
ಸಂಗೀತಾ ಹರಿಜನ
Published on

ಬಾಗಲಕೋಟೆ: ಬಹಿರ್ದೆಸೆಗೆಂದು ಮನೆಯಿಂದ ಹೋಗಿದ್ದ ಮಹಿಳೆ ಭೀಕರ ಹತ್ಯೆಯಾಗಿರುವ ಘಟನೆ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ನಡೆದಿದೆ.
ಹತ್ಯೆ ಆಗಿರುವ ಮಹಿಳೆಯನ್ನು ರಬಕವಿ ಗ್ರಾಮದ ಸಂಗೀತಾ ಹರಿಜನ(36) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ಕುತ್ತಿಗೆ ಸೇರಿ ದೇಹದ ವಿವಿಧ ಭಾಗಗಳಲ್ಲಿ ಕೊಚ್ಚಿ ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆಗೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಕೊಲೆ ಯಾರು ಮಾಡಿದ್ದಾರೆ ಎನ್ನುವುದು ಇನ್ನೂ ಪತ್ತೆ ಆಗಿಲ್ಲ. ಆದರೆ, ಪ್ರಾಥಮಿಕ ಮಾಹಿತಿಯಂತೆ ಕೊಲೆಗೆ ಅನೈತಿಕ ಸಂಬಂಧ ಕಾರಣ ಇರಬಹುದು ಎಂದು ತಿಳಿದು ಬಂದಿದೆ. ಅದಾಗ್ಯೂ ಎಲ್ಲ ಆಯಾಮಗಳಿಂದ ತನಿಖೆ ಮುಂದುವರೆಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಯಪ್ರಕಾಶ ತಿಳಿಸಿದ್ದಾರೆ.

ಕೊಲೆಯಾಗಿರುವ ಮಹಿಳೆ ಸಂಗೀತಾ ಅವರ ಪತಿ ಕಳೆದ ವರ್ಷ ಕರೊನಾದಿಂದ ಸಾವನ್ನಪ್ಪಿದ್ದ. ಮೂರು ಮಕ್ಕಳು ಇದ್ದಾರೆ. ಜಾತ್ರೆಗೆಂದು ತವರು ಮನೆ ತೇರದಾಳಕ್ಕೆ ತೆರಳಿದ್ದ ಸಂಗೀತಾ, ಗುರುವಾರ ಗಲಗಲಿಗೆ ಸಂತೆಗೆ ಹೋಗಿ ಬಂದಿದ್ದಳು. ರಾತ್ರಿ ಬಹಿರ್ದೆಸೆಗೆ ಹೋಗಿ ಬರುವುದಾಗಿ ಹೇಳಿದ್ದ ಸಂಗೀತಾ ಒಂದು ಗಂಟೆಯಾದರೂ ಮನೆಗೆ ಬಾರದ್ದರಿಂದ ಮಕ್ಕಳು ತಾಯಿಯನ್ನು ಹುಡುಕುತ್ತಿದ್ದಾಗ ಜಮೀನಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ. ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೀಳಗಿ ಆಸ್ಪತ್ರೆಗೆ ಎಸ್ಪಿ ಜಯಪ್ರಕಾಶ ಭೇಟಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯದ ಮೇರೆಗೆ ಇಬ್ಬರನ್ನು ವಿಚಾರಣೆ ಮಾಡಲಾಗುತ್ತಿದೆ. ಶೀಘ್ರದಲ್ಲಿ ಕೊಲೆ ಆರೋಪಿಗಳು ಪತ್ತೆ ಆಗಲಿದ್ದಾರೆ ಎಂದು ಎಸ್ಪಿ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net