ಕಾರವಾರ:ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಸ್ಥಳೀಯರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಾಂಡಿಶಿಟ್ಟಾದಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ. ಈ ಸಂಬಂಧ ದೂರು, ಪ್ರತಿ ದೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂಡಿಶಿಟ್ಟಾದ ವಿನೋದ ಬಿಣಗೇಕರ್ ಅವರ ಅಂಗಡಿಯಲ್ಲಿ ಉದ್ರಿ ಮಾಡಿ, ಸಾಮಗ್ರಿ ಖರೀದಿಸಿದ್ದ ಪ್ರಕಾಶ ನಾಯ್ಕ ಎಂಬ ವ್ಯಕ್ತಿ, ಮತ್ತೆ ಉದ್ರಿ ಸಿಗರೇಟ್ ನೀಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಕೊಡದಿದ್ದಕ್ಕೆ ವಿನೋದ ಅವರ ಪತ್ನಿ ಜತೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಇದರಿಂದ ಪ್ರಕಾಶನ ಮೇಲೆ ವಿನೋದ ಹಾಗೂ ಇತರರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಶಹರ ಠಾಣೆಯಲ್ಲಿ ವಿನೋದ ಬಿಣಗೇಕರ್ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ ಬಗ್ಗೆ ಪ್ರಕಾಶ ನಾಯ್ಕ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.