ಮಹಿಳಾ ಹಿಡುವಳಿದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ

6 (1)
ಜಿಲ್ಲಾಧಿಕಾರಿ ಜಾನಕಿ ಕೆ.ಎಂ
Published on

ಬಾಗಲಕೋಟೆ: ಜಿಲ್ಲೆಯಲ್ಲಿ 11ನೇ ಕೃಷಿ ಗಣತಿಯ ಮೊದಲ ಹಂತದ ಕ್ಷೇತ್ರಕಾರ್ಯ ಮುಕ್ತಾಯಗೊಂಡಿದ್ದು, ಕಳೆದ 10ನೇ ಕೃಷಿ ಗಣಿತಿಗೆ ತಾಳೆ ನೋಡಲಾಗಿ ಮಹಿಳಾ ಹಿಡುವಳಿದಾರರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ 11ನೇ ಕೃಷಿಗಣತಿಯ ಮೊದಲನೇ ಹಂತದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಬೆಳೆ ಸಮೀಕ್ಷೆ ನಿಖರವಾಗಿ ಕೊಳ್ಳಲು ತಿಳಿಸಿದ ಅವರು ಬೆಳೆ ಸಮೀಕ್ಷೆ ಕೈಗೊಳ್ಳುವ ಸಮಯದಲ್ಲಿ ಗ್ರಾಮ ನಿವಾಸಿಯ ನಿಖರವಾದ ಬೆಳೆಗಳ ವಿವರಗಳನ್ನು ದಾಖಲಿಸಲು ತಿಳಿಸಿದರು.

ಹಿಡುವಳಿದಾರರ ಜಮೀನಿನಲ್ಲಿ ನೀರಾವರಿ ಮೂಲಗಳು ಹಾಗೂ ವ್ಯವಸಾಯೇತರ ಉಪಯೋಗಕ್ಕಾಗಿ ಬಳಸಿದ ಕಟ್ಟಡಗಳ ವಿವರಗಳನ್ನು ಸರಿಯಾಗಿ ದಾಖಲಿಸಲು ಸೂಚಿಸಿದರು. ಬೆಳೆ ಸಮೀಕ್ಷೆಯಲ್ಲಿ ಸರಿಯಾದ ಸಮಯ ಹಾಗೂ ನಿಖರವಾಗಿ ಕೈಗೊಂಡರೆ, ರೈತರಿಗೆ ಬೆಳೆ ವಿಮಾ ಮತ್ತು ಬೆಳೆ ಪರಿಹಾರ ನೀಡುವ ಸಮಯದಲ್ಲಿ ಅನುಕೂಲವಾಗುತ್ತದೆ ಎಂದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆಕಟಾವು ಪ್ರಯೋಗಗಳನ್ನು ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಪಂಚಾಯತ ರಾಜ್ ಇಲಾಖೆಗಳಿಗೆ ಜಿಲ್ಲೆಯಲ್ಲಿ 3184 ಪ್ರಯೋಗಗಳನ್ನು ಹಂಚಿಕೆ ಮಾಡಿದ್ದು, ಮೂಲಕಾರ್ಯಕರ್ತರು ಕಡ್ಡಾಯವಾಗಿ ನಿಯಮಾನುಸಾರ ಕ್ರಮಕೈಗೊಳ್ಳಲು ಹಾಗೂ ಯಾವುದೇ ಪ್ರಯೋಗಗಳು ನಷ್ಟಗೊಳ್ಳದಂತೆ ಕ್ರಮವಹಿಸಲು ಸೂಚಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಗೌರಮ್ಮ ಸುಂಕದ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ವಿಡಿಯೋ ಸಂದಾದದ ಮೂಲಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net