ಮಹಿಳಾ ಸಬಲೀಕರಣಕ್ಕೆ ಸರ್ಕಾರದಿಂದ ಉತ್ತೇಜನ

26-MAR-GPT-2
Published on

ಗುಂಡ್ಲುಪೇಟೆ: ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಬುಧವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಕ್ಷೇತ್ರದ ಶಾಸಕಿಯಾಗಿದ್ದ ದಿ.ಕೆ.ಎಸ್.ನಾಗರತ್ನಮ್ಮ 7 ಬಾರಿ ಶಾಸಕಿ, ಒಮ್ಮೆ ಮಂತ್ರಿ, ಮತ್ತೊಮ್ಮೆ ವಿಧಾನಸಭೆಯ ಸ್ಪೀಕರ್ ಹಾಗೂ ವಿರೋಧಪಕ್ಷದ ನಾಯಕಿಯಾಗಿ ಆಗಿ ಸೇವೆ ಸಲ್ಲಿಸಿ ಮಹಿಳೆಯರ ಹೆಮ್ಮೆಗೆ ಪಾತ್ರರಾಗಿದ್ದರು.

ಜಿಲ್ಲೆಯಲ್ಲಿ ಹಲವಾರು ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳೇ ಅಧಿಕಾರದಲ್ಲಿ ಇರುವುದರಿಂದ ಮಹಿಳೆಯರ ಸುರಕ್ಷತೆ ಸಾಧ್ಯವಾಗಿದೆ. ಅಲ್ಲದೆ ಮಹಿಳೆಯರಿಗೆ ಸರ್ಕಾರ ನೀಡುವ ಎಲ್ಲ ಯೋಜನೆಗಳೂ ಫಲಾನುಭವಿಗಳಿಗೆ ತಲುಪುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮೂಲ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಯಾವುದೇ ಅನುದಾನದ ಕೊರತೆಯಾಗಿಲ್ಲ. ಕ್ಷೇತ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಹಂತಹಂತವಾಗಿ ಪೂರ್ಣಗೊಳ್ಳಲಿವೆ. ಅಂತರ್ಜಲ ಕೊರತೆಯಿರುವ ತಾಲೂಕಿನ ಕೆರೆಗಳನ್ನು ನದಿ ಮೂಲದಿಂದ ತುಂಬಿಸುವ ಯೋಜನೆಗೂ ಅನುದಾನ ಬಿಡುಗಡೆ ಮಾಡುವುದಾಗಿ ಉಪ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕೆಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಹಸೀಲ್ದಾರ್ ಟಿ.ರಮೇಶ್ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಹೇಮಾವತಿ, ಪುರಸಭೆ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜಶೇಖರ್, ಉಮಾ ಪತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net