

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಘಟನಾತ್ಮಕವಾಗಿ, ಶಕ್ತಿಶಾಲಿಯಾಗಿ ಹಾಗೂ ಅರ್ಥಪೂರ್ಣವಾಗಿ ಬೆಳೆಯಬೇಕಾದರೆ ಚುನಾವಣೆಗಳು ನಡೆಯುವುದು ಸೂಕ್ತ ಪ್ರಕ್ರಿಯೆ ಎಂದು ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು ಹೇಳಿದರು.
ಯಾವುದೇ ಮುಖಂಡರ, ನಾಯಕರು ಹೇಳಿದ ಮಾತು ಕೇಳಿ ತಮಗೆ ಬೇಕಾದವರ ಸಮಿತಿ ರಚಿಸಿ, ಉಳಿದವರಿಗೆ ನಿರಾಸೆ ಉಂಟುಮಾಡುವುದು ಸರಿಯಲ್ಲ. ಇಲ್ಲಿ ನಾಯಕರ ಅಭಿಪ್ರಾಯಕ್ಕಿಂತ ಜನಾಭಿಪ್ರಾಯ ಮುಖ್ಯ ಎಂದು ಅರಿತುಕೋಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಚುನಾವಣೆ ನಿಲ್ಲಬಾರದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖಂಡ ಎಂ.ಎಸ್.ಪಾಟೀಲ್ ನರಿಬೋಳ ಮಾತನಾಡಿ, ಚುನಾವಣೆಗೆ ಸ್ಪರ್ಧಿಸಲು ಸದಸ್ಯತ್ವ ಮಾಡಿಸಲಾಗಿತ್ತು. ಆದರೆ ನಮ್ಮನ್ನು ಹೊರಗಿಟ್ಟು ಸಭೆ ನಡೆಸಿ, ಅವಿರೋಧ ಆಯ್ಕೆ ಘೋಷಿಸಿದರು. ಇದೇ ಮಾದರಿ ಸಮಾಜದ ಮುಖಂಡರು ಜೇವರ್ಗಿ, ಸೇಡಂ, ಆಳಂದದಲ್ಲಿ ಶಾಸಕ ಚುನಾವಣೆಗೆ ಇಬ್ಬರು ಲಿಂಗಾಯತರು ಸ್ಪರ್ಧಿಸುವುದು ತಡೆದು, ಲಿಂಗಾಯತರು ಗೆಲ್ಲುವಂತೆ ಮಾಡಲಿ ಎಂದು ಸವಾಲು ಹಾಕಿದರು.
ದಿವ್ಯಾ ಹಾಗರಗಿ ಮಾತನಾಡಿ, ಹಿಂದಿನ ಅವಧಿಯಲ್ಲಿ ಜಿಲ್ಲಾಧ್ಯಕ್ಷರಾಗಿದ್ದವರು ಸಮಾಜದ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಂಚೋಳಿ, ಶಹಾಪುರ, ಅಫಜಲಪುರ ತಾಲೂಕಿನಲ್ಲಿ ಮಹಾಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಎಲ್ಲ ಸದಸ್ಯರು ಮತದಾನ ಮಾಡಬೇಕು. ತಾಲೂಕುಗಳಲ್ಲಿಯೂ ಅವಿರೋಧ ಆಯ್ಕೆ ಎಂದು ಬರುವವರಿಗೆ ಆದ್ಯತೆ ನೀಡಬಾರದು ಎಂದು ಆಗ್ರಹಿಸಿದರು.
ಆನಂದ ಹಿರೇಮಠ ಇದ್ದರು.