ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

2
Published on

ಹನೂರು: ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಿಸುವ ಮೂಲಕ 5 ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಜಾತ್ರೆಯ ಅಂಗವಾಗಿ ದೇಗುಲ, ಗರ್ಭಗುಡಿ ಸೇರಿದಂತೆ ಸುತ್ತಮುತ್ತಲಿನ ಆವರಣವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ. ಗೋಪುರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಮುಂಜಾನೆ 3 ಗಂಟೆಯಿಂದ 6ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರಿಂದ ದೇವರಿಗೆ ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಕಿರೀಟಧಾರಣೆಯ ಜತೆಗೆ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ವಿವಿಧ ದೀಪ, ಧೂಪಧಾರತಿ, ಮಹಾಮಂಗಳಾರತಿ ಬೆಳಗಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ರಾತ್ರಿ 8 ಗಂಟೆಯಲ್ಲಿ ದೇಗುಲದಲ್ಲಿ ಶ್ರೀಗಳ ನೇತೃತ್ವದಲ್ಲಿ ಅಭಿಷೇಕದ ಪೂಜೆ ನೆರವೇರಿಸಿದ ಬಳಿಕ ಬೇಡಗಂಪಣ ಅರ್ಚಕರು ಶಿವ-ಪಾರ್ವತಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಛತ್ರಿ, ಚಾಮರ ಹಾಗೂ ಮಂಗಳವಾದ್ಯದೊಂದಿಗೆ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಸಾಲೂರು ಬೃಹನ್ಮಠಕ್ಕೆ ಕೊಂಡೊಯ್ದು ಪೂಜಾ ಕೈಂಕರ್ಯ ನೆರವೇರಿಸಿದರು.

ಉತ್ಸವದಲ್ಲಿ ಭಾಗಿಯಾದ ಭಕ್ತರು: ಈಗಾಗಲೇ ಮ.ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಬೀಡು ಬಿಟ್ಟಿದ್ದು, ಇದರಲ್ಲಿ ಹರಕೆ ಹೊತ್ತ ಭಕ್ತರು ಬೆಳ್ಳಿ ತೇರು, ಹುಲಿ, ರುದ್ರಾಕ್ಷಿ, ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರು ಧನ, ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆದು ದಂಡಿನ ಕೋಲನ್ನು ಹೊತ್ತು ಸಾಗಿದರು. ಈ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬ ಜಯಘೋಷಣೆಗಳನ್ನು ಮೊಳಗಿಸಿದರು. ಇನ್ನು ಕೆಲ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ ಕೈಗೊಳ್ಳುವುದರ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.

ಚಿನ್ನದ ತೇರಿನ ಉತ್ಸವ: ಮ.ಬೆಟ್ಟದಲ್ಲಿ ಪ್ರತಿದಿನ ಸಂಜೆ 7ಕ್ಕೆ ಚಿನ್ನದ ತೇರಿನ ಉತ್ಸವ ಜರುಗುತ್ತದೆ. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲು ಹೊತ್ತು ಉತ್ಸವದಲ್ಲಿ ಭಾಗಿಯಾಗುತ್ತಾರೆ. ಸಾಮಾನ್ಯ ದಿನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ. ಆದರೆ ವಿಶೇಷ ದಿನಗಳಲ್ಲಿ ಹೆಚ್ಚಿನ ಭಕ್ತರ ಸಮ್ಮುಖದಲ್ಲಿ ಚಿನ್ನದ ತೇರಿನ ಉತ್ಸವವು ನೆರವೇರುತ್ತದೆ. ಹಾಗಾಗಿ ಸೋಮವಾರ ಸಂಜೆ ಜರುಗಿದ ಉತ್ಸವದಲ್ಲಿ ಈಗಾಗಲೇ ಮಹಾ ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಕಾಲ್ನಡಿಗೆಯ ಮೂಲಕ ಆಗಮಿಸಿ ಮ.ಬೆಟ್ಟದಲ್ಲಿ ಬೀಡು ಬಿಟ್ಟಿದ್ದ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಇದರಿಂದ ಚಿನ್ನದ ತೇರಿನ ಉತ್ಸವವು ವಿಜೃಂಭಣೆಯಿಂದ ಜರುಗಿತು.

ಕೆ.ವಿ.ಮಾದೇಶ್, ಬೇಡಗಂಪಣ ಅರ್ಚಕ

ವರ್ಷದಲ್ಲಿ 11 ತಿಂಗಳು ಮಾಸ ಶಿವರಾತ್ರಿ ಇರುತ್ತದೆ. ಇದು ಮಹಾ ಶಿವರಾತ್ರಿಯಾಗಿದ್ದು, ಲಿಂಗ ಸ್ವರೂಪಿಯಾದ ಮಹದೇಶ್ವರರನ್ನು ಶಿವನ ರೂಪದಲ್ಲಿ ಕಂಡು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 64 ಶಿವಗಣವಿದ್ದು, ಇದರಲ್ಲಿ ಬೇಡರ ಕಣ್ಣಪ್ಪ ಶಿವಶರಣ ವಂಶಸ್ಥರಿಗೆ ಮಾದಪ್ಪನಿಗೆ ಪೂಜೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ನಮ್ಮ ಪುಣ್ಯ.

ಇಂದು ಎಣ್ಣೆಮಜ್ಜನ ಸೇವೆ: ಮಹಾಶಿವರಾತ್ರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇಗುಲದಲ್ಲಿ ಬುಧವಾರ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ವಿವಿಧ ಅಭಿಷೇಕ ನೆರವೇರಿಸುವರು. ಬಳಿಕ ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಿ ಧೂಪ, ದೀಪಧಾರತಿ ಸೇವೆ ಹಾಗೂ ಮಹಾ ಮಂಗಳಾರತಿ ಬೆಳಗಿಸಲಾಗುವುದು. ಜತೆಗೆ ದೇಗುಲದಲ್ಲಿ ವಿವಿಧ ಉತ್ಸವಾದಿ ಸೇವೆಗಳು ನಡೆಯಲಿದೆ. ರಾತ್ರಿ ಶಿವನ ರೂಪದಲ್ಲಿ ಮಹದೇಶ್ವರರನ್ನು ನೆನೆಯುವ ಸಲುವಾಗಿ ಜಾಗರಣೆ ಉತ್ಸವ ಜರುಗಲಿದೆ.

ವಿದೇಶಿಯರು ಭಾಗಿ: ಈ ಬಾರಿಯ ಮಹಾ ಶಿವರಾತ್ರಿ ಜಾತ್ರೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದು, ಸೋಮವಾರ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಕೈ ಮುಗಿದರು. ಜಾತ್ರೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದೇಶಿಯರು ಮಾದಪ್ಪನ ಸನ್ನಿಧಿಗೆ ಆಗಮಿಸಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಿರಂತರ ದಾಸೋಹ ವ್ಯವಸ್ಥೆ, ಕುಡಿಯುವ ನೀರು, ನೆರಳು, ದೇವರ ದರ್ಶನ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಿದೆ. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗಿದೆ. ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರು ಮೊಕ್ಕಾಂ ಹೂಡಿದ್ದು, ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಸಂಬಂಧ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಮುತುವರ್ಜಿ ವಹಿಸಿದ್ದಾರೆ.

ಭಕ್ತರಿಂದ ತುಂಬಿದ ಮ.ಬೆಟ್ಟ: ಈಗಾಗಲೇ ಚಾ.ನಗರ ಸೇರಿದಂತೆ ಬೆಂಗಳೂರು, ಕನಕಪುರ, ರಾಮನಗರ, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಬಿಡದಿ, ಮದ್ದೂರು, ಮಳವಳ್ಳಿ, ಮಂಡ್ಯ, ಹಲಗೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಹಾಗೂ ರಾಜ್ಯದ ಇನ್ನಿತರ ಕಡೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕ ಮ.ಬೆಟ್ಟಕ್ಕೆ ಆಗಮಿಸಿದ್ದಾರೆ. ಮಾ.1ರವೆರೆಗೂ ಜಾತ್ರೆ ಇರುವುದರಿಂದ ಭಕ್ತರು ನಿತ್ಯ ನಡೆಯುವ ವಿವಿಧ ಸೇವೆಗಳಲ್ಲಿ ಭಾಗಿಯಾಗುವುದರ ಮೂಲಕ ಮ.ಬೆಟ್ಟದಲ್ಲೇ ಬೀಡು ಬಿಟ್ಟಿದ್ದಾರೆ. ದೇಗುಲದ ಸಮೀಪ ನೆರಳಿನ ವ್ಯವಸ್ಥೆ ಕಲ್ಪಿಸಿರುವ ಶಾಮಿಯಾನದ ಬಳಿ, ರಂಗಮಂದಿರ, ಮಹದೇಶ್ವರ ಶಾಲೆ ಆವರಣ ಹಾಗೂ ಇನ್ನಿತರ ಕಡೆಗಳಲ್ಲಿ ಭಕ್ತರು ತಂಗಿದ್ದಾರೆ. ಹಾಗಾಗಿ ಶ್ರೀಕ್ಷೇತ್ರದಲ್ಲಿ ಎತ್ತ ನೋಡಿದರೂ ಭಕ್ತಗಣ ತುಂಬಿ ತುಳುಕುತ್ತಿದ್ದು, ಜಾತ್ರೆಗೆ ಮೆರೆಗು ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net