ಮಹಾಲಯ ಅಮಾವಾಸ್ಯೆ ಶ್ರೀರಂಗಪಟ್ಟಣಕ್ಕೆ ಸಾವಿರಾರು ಭಕ್ತರು

SRP_21-01(a)jpj
Published on

ಶ್ರೀರಂಗಪಟ್ಟಣ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಮ್ಮ ಪೂರ್ವಜರಿಗೆ ಪಿತೃ ಪಕ್ಷದ ಧಾರ್ಮಿಕ ಕಾರ್ಯ ನೆರವೇರಿಸಲು ಸಾವಿರಾರು ಭಕ್ತರು ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದರು. ಹಾಗಾಗಿ ಎಲ್ಲೆಲ್ಲೂ ಜನಜಂಗುಳಿ ತುಂಬಿತ್ತು.

ಕಾವೇರಿ ತೀರದ ಸ್ನಾನಘಟ್ಟ, ಗಿಡ್ಡಿ ಬಾಗಿಲು(ಜಿ.ಬಿ)ಹೊಳೆ, ಸಂಗಮ, ಗೋಸಾಯ್ ಘಾಟ್ ಹಾಗೂ ಸಮೀಪದ ಪಶ್ಚಿಮವಾಹಿನಿಯ ನದಿ ತೀರಗಳಲ್ಲಿ ನೆರೆದಿದ್ದ ವಿವಿಧ ಸಮುದಾಯಗಳ ವೈದಿಕರಿಂದ ತಮ್ಮ ಸಂಪ್ರದಾಯದಂತೆ ತರ್ಪಣ, ಶಾಂತಿ ಹೋಮ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಅಪರ ಕರ್ಮಗಳನ್ನು ನೆರವೇರಿಸಿ ಪಿಂಡಪ್ರದಾನ ಮಾಡಿದರು.

ಈ ಬಾರಿ ಪುರಸಭೆಯಿಂದ ಕಾವೇರಿ ನದಿಯ ವಿವಿಧ ತೀರಗಳಲ್ಲಿ ಅಸ್ಥಿ ವಿಸರ್ಜನೆ, ಪಿಂಡಪ್ರದಾನ, ಧಾರ್ಮಿಕ ಅಪರ ಕ್ರಿಯೆ ನಡೆಸಲು ಹರಾಜು ಪ್ರಕ್ರಿಯೆ ಮೂಲಕ ಟೆಂಡರ್ ನೀಡಿರುವ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯ ಗುತ್ತಿಗೆದಾರರಿಗೆ ಭರ್ಜರಿ ಹಣ ಸಂಗ್ರಹವಾಗಿದೆ ಎನ್ನಲಾಗಿದೆ. ಯಾರು ವೈದಿಕರು, ಯಾರು ಜನರು ಎಂಬುದು ಯಾವುದೇ ವಿಚಾರವಿಲ್ಲದೆ ನದಿಗಿಳಿದ ಮೇಲೆ ನಿಗದಿತ ಶುಲ್ಕ ಪಾವತಿಸುವಂತೆ ಚೀಟಿ ಹರಿಯಲಾಗಿದೆ. ಇನ್ನು ಹೆಚ್ಚು ಜನರ ಆಗಮನದಿಂದ ಸ್ಥಳೀಯ ಬೀದಿ ಬದಿಯ ವ್ಯಾಪಾರಿಗಳಾದ ಹಣ್ಣು- ಕಾಯಿ, ಹೂವು, ತರಕಾರಿ, ಪನ್ಸಾರಿ ಸಾಮಗ್ರಿಗಳ ಮಾರಾಟಗಾರರು, ಆಟೋ ಚಾಲಕರಿಗೆ ಉತ್ತಮ ವ್ಯಾಪಾರವಾಯಿತು.

ರಾಜ್ಯದ ವಿವಿಧೆಡೆಯಿಂದ ಜನರು ಹಾಗೂ ಪ್ರವಾಸಿಗರು ಮುಂಜಾನೆ 5 ಗಂಟೆಯಿಂದಲೇ ಆಗಮಿಸುತ್ತಿದ್ದರಿಂದ ಪಟ್ಟಣದ ಮುಖ್ಯ ರಸ್ತೆ, ನದಿ ತೀರದ ರಸ್ತೆ ಹಾಗೂ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನ ತುಂಬೆಲ್ಲ ಜನಜಂಗುಳಿ ತುಂಬಿತ್ತು. ಸಾವಿರಾರು ಸಂಖ್ಯೆಯ ವಾಹನಗಳಿಂದ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಟೌನ್ ಠಾಣೆಯ ಪೊಲೀಸರು ವಾಹನ ದಟ್ಟಣೆ ನಿವಾರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ನಿರಂತರವಾಗಿ ಶ್ರಮಿಸಿ ಹೈರಾಣಾದರು. ನದಿ ತೀರಗಳಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಮುಂಜಾಗ್ರತ ಕ್ರಮ ಕೈಗೊಂಡಿದ್ದರು.

ಧಾರ್ಮಿಕ ಕಾರ್ಯ ನೆರವೇರಿಸಲು ಹಲವರು ಪ್ರತಿ ಪೂಜೆಗೆ ಕನಿಷ್ಠ 2 ಸಾವಿರ ರೂ.ನಿಂದ 10 ಸಾವಿರ ರೂ.ಗಳನ್ನು ಜನರಿಂದ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net