ಮಹಾಬಲೇಶ್ವರ ಮಂದಿರದಲ್ಲಿ ಹಂತ ಹಂತದ ಸಿದ್ಧತೆ

6gkn2-a-
Published on

ಗೋಕರ್ಣ: ಸರ್ಕಾರ ಜೂ.8 ರಂದು ಮಂದಿರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಪರಶಿವ ಆತ್ಮಲಿಂಗ ಸನ್ನಿಧಿ ಮಹಾಬಲೇಶ್ವರ ಮಂದಿರದಲ್ಲಿ ಹಂತ ಹಂತದಲ್ಲಿ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ಮಂದಿರವನ್ನು ಭಕ್ತರಿಗೆ ಮುಕ್ತವಾಗಿಸುವ ಸಂಬಂಧ ಸರ್ಕಾರದಿಂದ ಅಧಿಕೃತ ಆದೇಶ ಪತ್ರಕ್ಕೆ ಕಾಯಲಾಗುತ್ತಿದೆ. ಮಂದಿರ ಪ್ರವೇಶಿಸುವ ಪ್ರತಿ ಭಕ್ತರು ಶುಚಿಗೊಳ್ಳಲು ವ್ಯವಸ್ಥೆಯಾಗಿದೆ. ಥರ್ಮಲ್ ಸ್ಕಾನಿಂಗ್ ಹಾಗೂ ಮಾಸ್ಕ್​ಗಳನ್ನು ತರಿಸಲಾಗಿದ್ದು ಭಕ್ತರ ಆರೋಗ್ಯ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಮುಟ್ಟಿ ಪೂಜಿಸುವ ಅವಕಾಶ ಇರುವುದರಿಂದ ಸರ್ಕಾರದ ಆದೇಶದ ಪ್ರಕಾರ ಪರಸ್ಪರ ಅಂತರ ಕಾದು ಕೊಳ್ಳುವ ವಿಧಾನ ಮತ್ತು ಮಂದಿರದಲ್ಲಿನ ಇನ್ನಿತರ ಕಾರ್ಯಸೂಚಿಗಳ ನಂತರ ಹಂತ ಹಂತವಾಗಿ ಮಂದಿರವನ್ನು ಮುಕ್ತವಾಗಿಸಲು ನಿರ್ಧರಿಸಲಾಗಿದೆ. ಸರ್ಕಾರದ ಆದೇಶದಂತೆ ತೀರ್ಥ ಪ್ರಸಾದ ನಿಷೇಧಿಸಲಾಗುತ್ತಿದೆ.

ಸೀಮಿತವಾಗಿ ಭೋಜನ ವ್ಯವಸ್ಥೆಗೆ ಅವಕಾಶವಿದ್ದು ಇದನ್ನು ಕೂಡ ಎಲ್ಲ ತಯಾರಿಯ ನಂತರ ಪ್ರಾರಂಭಿಸಲಾಗುವುದಾಗಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂದಿರ ಹಿಂದಿನಂತೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ಬದಲು ಮಂದಿರದಲ್ಲಿನ ಹಂತ ಹಂತದ ಪ್ರಕ್ರಿಯೆಗಳಿಗೆ ಜೂ.8 ರಂದು ಚಾಲನೆ ದೊರೆಯುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net