

ಬಾಗಲಕೋಟೆ: ಗಣೇಶ ಉತ್ಸವ ಹಿನ್ನಲೆಯಲ್ಲಿ ಇಲ್ಲಿನ ವಿನಾಯಕ ನಗರದಲ್ಲಿ ಮಾತೃಭೂಮಿ ಯುವಕ ಮಂಡಳಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿ ಭವ್ಯ ಮೆರವಣಿಗೆ ಕೋಟೆನಗರಿಯಲ್ಲಿ ಭಾನುವಾರ ಜರುಗಿತು.
ಮಧ್ಯಾಹ್ನ ೩ ಗಂಟೆಗೆ ಆರಂಭವಾದ ಮೆರವಣಿಗೆ ವಿನಾಯಕ ನಗರ, ಕೆರೂಡಿ ಆಸ್ಪತ್ರೆ ರಸ್ತೆ, ಸ್ಟೇಷನ್ ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶೋಭಯಾತ್ರೆಯಲ್ಲಿ ವಿವಿಧ ವಾದ್ಯವೈಭವಗಳ ಜೊತೆಗೆ ಅಪಾರ ಸಂಖ್ಯೆಯ ಯುವಕರ ಜಯಘೋಷಗಳು ಮೆರವಣಿಗೆಯ ಆಕರ್ಷಣೆ ಕೇಂದ್ರವಾಗಿತ್ತು. ಭಾರತೀಯ ಸಂಸ್ಕೃತಿಯ ಪ್ರತೀಕ ವಾಗಿರುವ ಸಾಂಗ್ಲಿಯ ೧೩೦ ಜನ ಯುವಕ-ಯುವತಿಯರಿಂದ ಡೋಲï ತಾಷಾ ಪಥಕ್ ನುಡಿಸುವುದಕ್ಕೆ ಸಾರ್ವಜನಿಕರು ಮನಸೋತರು.
ಉಡುಪಿಯ ೩೦ ಕಲಾವಿದರ ತಂಡದಿಂದ ಚಂಡಿ ವಾದನ, ಮಂಗಳೂರಿನ ಓಂಕಾರ ಕುಣಿತ ಭಜನಾ ಮಂಡಳಿ, ಡೊಳ್ಳು ಕುಣಿತ, ಗೊಂಬೆಗಳ ಕುಣಿತ ಸೇರಿ ಹಲವು ಸ್ಥಳೀಯ ವಾದ್ಯ ವೈಭವಗಳು ಮೆರವಣಿಗೆಗೆ ಕಳೆಗಟ್ಟಿದವು. ಅಪಾರ ಸಂಖ್ಯೆ ಭಕ್ತರಿಂದ ಶೋಭಾಯಾತ್ರೆ ವೀಕ್ಷಣೆ ಮಾಡಿದರು. ರಾತ್ರಿ ೧೦ ಗಂಟೆ ವರೆಗೂ ಮೆರವಣಿಗೆ ನಡೆದಿದ್ದು, ವಿಶೇಷ ವಾಗಿತ್ತು. ಬಳಿಕ ಬಾಗಲಕೋಟೆ ಸಿಮೆಂಟ್ ಕ್ವಾರಿಯ ಆಲಮಟ್ಟಿ ಹಿನ್ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು.
ಇನ್ನು ಜಿಲ್ಲೆಯಾದ್ಯಂತ ೯ನೇ ದಿನದ ಗಣಪತಿ ವಿಸರ್ಜನೆ ನಡೆದವು. ೧೯೬ ಸಾರ್ವಜನಿಕರ ಗಣಪತಿಗಳನ್ನು ವಿಸರ್ಜನೆ ಮಾಡಲಾಯಿತು.