ಮಹರ್ಷಿ ವಾಲ್ಮೀಕಿ ಆದರ್ಶಗಳು ಎಲ್ಲರಿಗೂ ದಾರಿದೀಪ

IMG-20251007-WA0169
Published on

ಅರಕಲಗೂಡು: ಮಾನವ ಕುಲದ ಉದ್ಧಾರಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅಭಿಪ್ರಾಯಪಟ್ಟರು.

ಪಟ್ಟಣದ ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಉಪನ್ಯಾಸಕ ಹರೀಶ್ ಮಾತನಾಡಿ, ಮಾನವ ಜೀವನಕ್ಕೆ ರಾಮಾಯಣವೇ ಆದರ್ಶ. ಮನುಷ್ಯನು ಹೇಗೆ ಬದುಕಬೇಕೆಂದು ರಾಮಾಯಣವನ್ನು ಆದರ್ಶವಾಗಿ ಇಟ್ಟುಕೊಂಡು ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವಾಲ್ಮೀಕಿ ಅವರನ್ನೂ ರಾಮಾಯಣದ ಶ್ರೀರಾಮಚಂದ್ರರನ್ನೂ ಸಮಾನವಾಗಿ ನೆನಪಿಸಬೇಕು ಎಂದು ಕುವೆಂಪು ಹೇಳುತ್ತಾರೆ. ಅಂತಹ ಮಹಾನ್ ಗ್ರಂಥವನ್ನು ಬರೆಯುವುದು ಮಹಾಪುರುಷರಿಂದ ಮಾತ್ರ ಸಾಧ್ಯ. 24 ಸಾವಿರ ಶ್ಲೋಕಗಳನ್ನು ರಚಿಸಿದ ವಾಲ್ಮೀಕಿ ಮಹರ್ಷಿ ಅವರು ಮಹಾಪುರುಷರಾಗಿದ್ದರು ಎಂದರು.

ಕಾರ್ಯಕ್ರಮಕ್ಕೂ ಮೊದಲು ತಾಲೂಕು ಕಚೇರಿಯಿಂದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಸನ್ಮಾನಿಸಲಾಯಿತು.

ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ತಾಪಂ ಇಒ ಶ್ರೀನಿವಾಸ್, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ಗ್ರೇಡ್-2 ತಹಸೀಲ್ದಾರ್ ಸಿ.ಸ್ವಾಮಿ, ಉಪ ನೋಂದಣಾಧಿಕಾರಿ ಸೋಮಶೇಖರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ಮಾಜಿ ಅಧ್ಯಕ್ಷ ಹೂವಣ್ಣ ಹಾಗೂ ಸಮುದಾಯದ ಮುಖಂಡರಾದ ಬಸವ ನಾಯಕ್, ಸಿದ್ದರಾಜು, ಶಿವರಾಮ್, ವೆಂಕಟೇಶ್, ಯೋಗೇಶ ನಾಯಕ, ರಾಮನಾಯಕ, ಬುಲೆಟ್ ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net