

ಬಾಗಲಕೋಟೆ: ಇಲ್ಲಿನ ದಡ್ಡೆನ್ನವರ ಆಸ್ಪತ್ರೆ ಪಕ್ಕದಲ್ಲಿರುವ ಬಡಾವಣೆಯಲ್ಲಿ ಅನುಮತಿ ಇಲ್ಲದಿದ್ದರೂ ನಿರ್ಮಿಸುತ್ತಿರುವ ಮಸೀದಿ ನಿರ್ಮಾಣ ಕಾರ್ಯವನ್ನು ತಡೆಯಬೇಕು ಎಂದು ಆಗ್ರಹಿಸಿ ಮಂಗಳವಾರ ಅಲ್ಲಿನ ನಿವಾಸಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದರೂ ತಡೆದಿಲ್ಲ. ಮಸೀದಿ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ನಗರಸಭೆಯಲ್ಲಿ ಇದಕ್ಕೆ ಅನುಮತಿ ದೊರೆತಿಲ್ಲ. ಹತ್ತಿರದಲ್ಲೇ ಆಸ್ಪತ್ರೆ, ಶಾಲಾ–ಕಾಲೇಜು, ಜನ ವಸತಿಗಳಿವೆ. ಧ್ವನಿವರ್ಧಕದಿಂದ ಆಸ್ಪತ್ರೆ ರೋಗಿಗಳಿಗೆ ತೊಂದರೆಯಾಗಲಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ವಿದ್ಯಾಗಿರಿಯ ನಾಲ್ಕನೇ ರಸ್ತೆ, ಆಶ್ರಯ ಬಡಾವಣೆ, ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ಹಲವು ಕಡೆಗಳಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಕೂಡಲೇ ನಗರಸಭೆ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಕುಮಾರಸ್ವಾಮಿ ಹಿರೇಮಠ, ಮಸೀದಿ ಕುರಿತು ತೀರ್ಮಾನ ಕೈಗೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರಸಭೆಯ ಎಲ್ಲ ಪಕ್ಷದ ಸದಸ್ಯರೂ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು. ಕ್ರಮಕೈಗೊಳ್ಳದಿದ್ದರೆ ನಗರಸಭೆ ಅಧ್ಯಕ್ಷೆ ಮನೆ ಹಾಗೂ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಪೌರಾಯುಕ್ತ ವಾಸಣ್ಣ ಮಾತನಾಡಿ, ವೀಕ್ಷಣೆಗೆ ಅಧಿಕಾರಿಗಳನ್ನು ಕಳುಹಿಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ನಗರಸಭೆ ಸದಸ್ಯರಾದ ಶಶಿಕಲಾ ಮಜ್ಜಗಿ, ಸ್ಮಿತಾ ಪವಾರ್, ಮುಖಂಡ ಈರಣ್ಣ ಲಾಯಗುಂದಿ, ಸುರೇಶ ಮಜ್ಜಗಿ, ನಾಗರಾಜ ಅಂಬಿಗೇರ, ಚಂದ್ರು ರಾಮವಾಡಗಿ, ನಾಗರಾಜ ಹೊರಕೇರ, ಶಂಕರ ಕದಂ ಮತ್ತಿತರರು ಇದ್ದರು.