

ಅಂಕೋಲಾ: ತಾಲೂಕಿನಲ್ಲಿ ಶುಕ್ರವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಅಲ್ಲಲ್ಲಿ ಸಣ್ಣ ಪುಟ್ಟ ಹಾನಿ ಸಂಭವಿಸಿದೆ. ಇದರಿಂದಾಗಿ ನದಿ ತೀರದ ನಿವಾಸಿಗಳು ಕೂಡ ಆತಂಕಗೊಂಡಿದ್ದು, ಮಳೆ ಹೀಗೆ ಮುಂದುವರಿದರೆ ನೆರೆ ಸಂಭವಿಸುವುದು ನಿಶ್ಚಿತವಾಗಿದೆ.
ಹೊನ್ನೆಬೈಲ್ ಗ್ರಾಮದಲ್ಲಿ ಹಾದು ಹೋಗಿರುವ ಪುಟ್ಟ ಹಳ್ಳ ತುಂಬಿ ಹರಿದು ಅಕ್ಕ ಪಕ್ಕದ ಜಮೀನುಗಳಿಗೆ ಹಾನಿ ಮಾಡಿದೆ. ಗಿರಿಜಾ ಹನುಮಂತ ನಾಯ್ಕ ಅವರ ಜಾಗದಲ್ಲಿ ಮಳೆ ನೀರು ತುಂಬಿ ಪಾಗಾರ ಕೊಚ್ಚಿಕೊಂಡು ಹೋಗುವುದರ ಜೊತೆಗೆ ಗಿಡ ಮರಗಳಿಗೆ ಹಾನಿ ಉಂಟಾಗಿದೆ.
ಶಿರೂರು, ಬೆಳಸೆ, ಜಮಗೋಡ, ಬೋಳೆ, ಬಾಸಗೋಡ, ಹಿಚ್ಕಡ, ಕಣಗಿಲ, ದಂಡೆಭಾಗ ಹೀಗೆ ವಿವಿಧ ಭಾಗಗಳಲ್ಲಿ ಮಳೆ ನೀರು ನಿಂತು ಸಮಸ್ಯೆ ಉಂಟು ಮಾಡಿದೆ. ಕಳೆದ ಆಗಷ್ಟ್ನಲ್ಲಿ ನೆರೆ ಹಾವಳಿಯಿಂದಾಗಿ ತಾಲೂಕಿನ ಜನರು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಈಗ ಆಗಷ್ಟ್ ತಿಂಗಳ ಆರಂಭಕ್ಕೂ ಮುನ್ನವೇ ಜನರಲ್ಲಿ ಭೀತಿ ಮೂಡಿಸಿದೆ.