

ಮುಂಡಗೋಡ: ಆಗಾಗ ಬೀಳುತ್ತಿರುವ ಮಳೆಯಿಂದಾಗಿ ಗೋವಿನ ಜೋಳದ ಫಸಲನ್ನು ಕಟಾವು ಮಾಡುವುದಕ್ಕೆ ಮತ್ತು ಕಟಾವು ಮಾಡಿದ ಗೋವಿನ ಜೋಳದ ಕಾಳುಗಳನ್ನು ಒಣಗಿಸುವುದಕ್ಕೆ ರೈತರು ಹರ ಸಾಹಸ ಪಡುತ್ತಿದ್ದಾರೆ.
ತಾಲೂಕಿನಲ್ಲಿ ಸುಮಾರು 4500 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬೆಳೆಯಲಾಗಿದ್ದು ಈಗಾಗಲೇ ಗೋವಿನ ಜೋಳದ ತೆನೆಗಳು ಸಂಪೂರ್ಣವಾಗಿ ಮಾಗಿ ಕಟಾವು ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಕಳೆದ 10-15 ದಿನಗಳಿಂದ ಸುಮಾರು ಶೇ.60ರಷ್ಟು ಗೋವಿನ ಜೋಳದ ಬೆಳೆಯನ್ನು ರೈತರು ಕಟಾವು ಮಾಡಿ ತೆನೆಗಳಿಂದ ಕಾಳುಗಳನ್ನು ಬೇರ್ಪಡಿಸುತ್ತಿದ್ದಾರೆ. ಖಾಲಿ ಇರುವ ಜಾಗಗಳಲ್ಲಿ ಹಾಗೂ ರಸ್ತೆಯ ಅಕ್ಕ-ಪಕ್ಕದಲ್ಲಿ ಕಾಳುಗಳನ್ನು ಬಿಸಿಲಿಗೆ ಒಣಗಿಸಲು ಹಾಕುತ್ತಿದ್ದಾರೆ. ಇನ್ನು ಕೆಲವು ರೈತರು ಎಪಿಎಂಸಿ ಆವರಣದಲ್ಲಿ ಕಾಳುಗಳ ರಾಶಿ ಮಾಡಿ ಹಾಕಿದ್ದಾರೆ.
ಕುಸಿದ ದರ: ಅತಿಯಾದ ಮಳೆಯಿಂದ ಈ ಬಾರಿಯ ಗೋವಿನ ಜೋಳದ ಇಳುವರಿ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ. ಬಂದಷ್ಟು ಇಳುವರಿಗೆ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಇದ್ದರು. ಕಳೆದ ಬಾರಿ ಗೋವಿನ ಜೋಳದ ಬೆಲೆ ಕ್ವಿಂಟಾಲ್ಗೆ 1800 ರೂ. ಇತ್ತು. ಆದರೆ, ಈ ಬಾರಿ ಕ್ವಿಂಟಾಲ್ಗೆ ಕೇವಲ 1200 ರೂ. ಇದೆ.
ಆರಂಭದಲ್ಲಿಯೇ ಬಿಡುವಿಲ್ಲದೆ ಸುರಿದ ಮಳೆಗೆ ಗೋವಿನ ಜೋಳದ ಬೆಳೆ ಕುಂಠಿತಗೊಂಡು ಇಳುವರಿ ಕಡಿಮೆಯಾಗಿದೆ. ಈಗ ತೆನೆ ಕೊಯ್ಲು ಮತ್ತು ಒಣಗಿಸುವ ಸಮಯದಲ್ಲಿ ಮತ್ತೆ ಮಳೆರಾಯ ಕಾಡುತ್ತಿದ್ದಾನೆ. ಮೊದಲು ಹೊಲದಲ್ಲಿಯೇ ಕಣಗಳನ್ನು ಮಾಡಿ ಕಾಳುಗಳನ್ನು ಒಣಗಿಸುತ್ತಿದ್ದೆವು. ಆದರೆ, ಈಗ ಮಳೆಯ ಕಾರಣದಿಂದ ರಸ್ತೆಯ ಬದಿಗಳಲ್ಲಿ ಬಿಸಿಲಿಗಾಗಿ ಕಾಯುತ್ತಾ ಒಣಗಿಸಿ ಮಾರುಕಟ್ಟೆಗೆ ಒಯ್ಯಬೇಕಾಗಿದೆ. | ಅಬ್ದುಲ್ ರಶೀದ್ ಗಾಜಿಪುರ ಮುಂಡಗೋಡ ರೈತ