

ವಿರಾಜಪೇಟೆ: ತಾಲೂಕಿನ ಆರ್ಜಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ವಸತಿ ಶಾಲೆಯೊಂದರ ಆವರಣದ ತಡೆಗೋಡೆ ಎರಡು ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕುಸಿದು ಬಿದ್ದಿದೆ.
ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಪೆರುಂಬಾಡಿಯಲ್ಲಿರುವ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ ಆವರಣದ ತಡೆಗೋಡೆಯು ನಿರ್ಮಾಣದ ಹಂತದಲ್ಲಿದ್ದು, ಇದೀಗ ಎರಡನೇ ಬಾರಿ ಕುಸಿದಿದ್ದು. ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆಯಿಂದಾಗಿ ತಡೆಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ತಡಗೋಡೆಯ ಅವಶೇಷಗಳು ಸಮೀಪದಲ್ಲಿರುವ ಕಾಫಿ ತೋಟದ ಒಳಗೆ ಹಾಗೂ ಕಾಫಿ ತೋಟಕ್ಕೆ ಸಂಚರಿಸುವ ರಸ್ತೆಯ ಮೇಲೆ ಬಿದ್ದಿದೆ.
ವಸತಿ ಶಾಲೆಯ ಆವರಣದಲ್ಲಿ ಕ್ರೀಡಾಂಗಣಕ್ಕಾಗಿ ಬೇರೆಡೆಯಿಂದ ಮಣ್ಣನ್ನು ತಂದು ಹಾಕಲಾಗಿದ್ದು ನಿರಂತರವಾಗಿ ಸುರಿದ ಭಾರಿ ಮಳೆಯ ಪರಿಣಾಮವಾಗಿ ಮಳೆನೀರು ಹರಿದು ಹೋಗಲು ಸಾಧ್ಯವಾಗದೆ ಮೈದಾನ ನಿರ್ಮಾಣಕ್ಕೆ ಹಾಕಿದ್ದ ಮಣ್ಣಿನಲ್ಲಿ ಸೇರಿ ಒತ್ತಡ ನಿರ್ಮಾಣವಾಗಿದೆ. ಇದರಿಂದಾಗಿ ಬೆಂಗಳೂರಿನ ಕ್ರೈಸ್ ಸಂಸ್ಥೆಯಿಂದ ನಿರ್ಮಾಣವಾಗುತಿದ್ದ ಬೃಹತ್ ಗಾತ್ರದ ತಡೆಗೋಡೆಯು ನಿರ್ಮಾಣ ಹಂತದಲ್ಲಿ ಇದೀಗ ಎರಡನೇ ಬಾರಿ ಕುಸಿದಿದೆ. ಸದ್ಯದ ಮಟ್ಟಿಗೆ ಜೆಸಿಬಿ ಮೂಲಕ ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಸ್ಥಳಕ್ಕೆ ಆರ್ಜಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಪುಟ್ಟಸ್ವಾಮಿ ಮೇ 23ರಂದು ಭಾರಿ ಮಳೆಯ ಕಾರಣ ಶಾಲೆಯ ಆವರಣದೊಳಗೆ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆಯು ಕುಸಿದು ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.