ಮಳೆ ಅನಾಹುತ ತಡೆಗೆ ಸಜ್ಜಾಗಿ

29HDK0003
Published on

ಎಚ್.ಡಿ.ಕೋಟೆ: ಮುಂಗಾರು ಮಳೆ ಆರಂಭವಾಗಿದ್ದು ಮಳೆ ಹಾನಿಯಿಂದ ತಾಲೂಕಿನಲ್ಲಿ ಯಾವುದೇ ಪ್ರಾಣಹಾನಿ ಆಗದಂತೆ ತಾಲೂಕು ಆಡಳಿತ ಕ್ರಮವಹಿಸಲು ಸಜ್ಜಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದರು. ತಾಲೂಕು ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವುದರಿಂದ ಅಧಿಕ ಪ್ರಮಾಣದಲ್ಲಿ ಮಳೆ ಆಗಲಿದೆ. ಮಳೆಗಾಲ ಬಂತೆಂದರೆ ತಾಲೂಕಿನ ಗಡಿಭಾಗದ ಜನರು ತಲ್ಲಣಕ್ಕೆ ಒಳಗಾಗುತ್ತಾರೆ. ಈ ಹಿಂದೆ 2019ರಲ್ಲಿ ಪ್ರವಾಹಕ್ಕೆ ಸಿಲುಕಿ ಅನೇಕ ಕುಟುಂಬಗಳು ನಿರಾಶ್ರಿತರಾಗಿದ್ದವು. ಅನೇಕ ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದವು. ರೈತರು ಬೆಳೆ ಕಳೆದುಕೊಂಡು ನಷ್ಟಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ತಾಲೂಕು ಆಡಳಿತ ಸಮಾರೋಪಾದಿಯಲ್ಲಿ ಪರಿಹಾರ ನೀಡಲು ಕ್ರಮವಹಿಸಿತ್ತು. ಆದರೆ, ಇಂದಿಗೂ ಆ ಕರಿ ನೆರಳು ಜನರ ಮನಸ್ಸಿನಲ್ಲಿ ಇದೆ ಎಂದು ತಿಳಿಸಿದರು.

ಈ ಬಾರಿ ಅನಾಹುತ ಆಗುವುದಕ್ಕೂ ಮುನ್ನ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಕಬಿನಿ ಜಲಾಶಯ ಹಿನ್ನೀರಿನ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವುದರಿಂದ ಮುಳುಗಡೆಯಾಗುವ ಸಂಭವವಿರುವ ಜನರನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಮಾಡಿದ್ದು ಆ ಸಮಿತಿಯು ಮಳೆ ಹಾನಿಯಿಂದ ಆಗುವಂತಹ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹೆಚ್ಚು ಮಳೆಯಾಗಿ ಮುಳುಗಡೆ ಆಗುವ ಪ್ರದೇಶದ ಜನರನ್ನು ಕಾಳಜಿ ಕೇಂದ್ರ ತೆರೆದು ಅಲ್ಲಿಗೆ ಸ್ಥಳಾಂತರ ಮಾಡಲು ಕ್ರಮವಹಿಸಬೇಕು. ಅದೇ ರೀತಿ ಪ್ರಾಣ ಹಾನಿ, ಬೆಳೆ ಹಾನಿ ಆಗದಂತೆ ಕ್ರಮ ಕೈಗೊಳ್ಳಲು ದಿನದ ಇಪ್ಪತ್ತು ನಾಲ್ಕು ಗಂಟೆ ಸಜ್ಜಾಗಿರುತ್ತಾರೆ ಎಂದು ತಿಳಿಸಿದರು.

ಪ್ರತಿ ಹೋಬಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು ಅವರು ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಿ ಟಾಸ್ಕ್‌ಫೋರ್ಸ್ ಸಮಿತಿಗೆ ವರದಿ ನೀಡಲಿದ್ದಾರೆ. ಇದರಿಂದ ಕೇಂದ್ರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಸಹಕಾರಿ ಆಗಲಿದೆ. ನೋಡಲ್ ಅಧಿಕಾರಿಗಳ ಜತೆಯಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು, ಉಪ ತಹಸೀಲ್ದಾರ್ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಕಬಿನಿ, ತಾರಕ ಜಲಾಶಯಗಳ ಹೊರ ಮತ್ತು ಒಳಹರಿವು ಬಗ್ಗೆ ಹೆಚ್ಚು ನಿಗಾ ಇಡಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ತಮ್ಮ ಕೆಲಸ ನಿರ್ವಹಿಸಬೇಕು. ತಾಲೂಕಿನ ಡಿ.ಬಿ.ಕುಪ್ಪೆ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಗುರುತಿಸಲಾಗಿದೆ. ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚೂರು, ಅನೆಮಾಳ, ಮುಳ್ಳೂರು, ಕಡೆಗದ್ದೆ, ಗ್ರಾಮಗಳಲ್ಲಿ ನೆರೆ ಸಂಭವಿಸಬಹುದು. ಕಬಿನಿ ಜಲಾಶಯದ ಮುಂಭಾಗ ಇರುವ ಸೇತುವೆ ಹಾಗೂ ಇತರ ಮುಳುಗಡೆ ಆಗುವ ಸೇತುವೆಗಳಿಗೆ ಪೊಲೀಸ್ ಭದ್ರತೆ ವ್ಯವಸ್ಥೆಗಳನ್ನು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯುತ್ ವ್ಯವಸ್ಥೆ, ರಸ್ತೆಗಳಲ್ಲಿ ಮರಗಳು ಬೀಳುವ ಸಾಧ್ಯತೆಗಳಿರುವ ಕಾರಣ ಅಗತ್ಯ ಕ್ರಮವಹಿಸಲು ಸೆಸ್ಕ್ ಹಾಗೂ ಅರಣ್ಯ ಇಲಾಖೆಗೆ ಸೂಚಿಸಿದರು.

ಸರಗೂರು ತಹಸೀಲ್ದಾರ್ ಮೋಹನ್ ಕುಮಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಕೋಟೆ ಇಒ ಧರಣೇಶ್, ಸರಗೂರು ಇಒ ಪ್ರೇಮ್‌ಕುಮಾರ್, ಕೃಷಿ ಅಧಿಕಾರಿ ಜಯರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಪರಿಶಿಷ್ಟ ಕಲ್ಯಾಣ ವರ್ಗಗಳ ಅಧಿಕಾರಿ ಮಹೇಶ್, ಅಧಿಕಾರಿಗಳಾದ ಚಂದು ಕುಮಾರ್, ವಸಂತ್ ಕುಮಾರ್, ಮಂಜುನಾಥ್, ಉಷಾ, ಪ್ರಸನ್ನ, ಗೋವಿಂದ ನಾಯಕ, ವಿಶ್ವನಾಥ್, ರವಿಚಂದ್ರ, ವೈ.ಡಿ.ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net