ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ಮಳಿಗೆಗಳ ಬಹಿರಂಗ ಹರಾಜಿನಲ್ಲಿ ಕೆಲವು ಮಧ್ಯವರ್ತಿಗಳು, ಪಟ್ಟಣ ಪಂಚಾಯಿತಿಯ ಕೆಲ ಸಿಬ್ಬಂದಿ ಹಾಗೂ ಇಬ್ಬರು ಪಂಚಾಯಿತಿ ಸದಸ್ಯರ ಕುಮ್ಮಕ್ಕಿನಿಂದ ಬಡ ವರ್ತಕರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರೈತ ಸಂಘ ಅಸಮಾಧಾನ ವ್ಯಕ್ತ ಪಡಿಸಿದೆ.
ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಅವ್ಯವಹಾರದ ಮೂಲಕ ಮಧ್ಯವರ್ತಿಗಳು ಲಕ್ಷಾಂತರ ರೂ.ಗಳನ್ನು ಮಾಡಿಕೊಂಡಿರುವುದು ಖಂಡನೀಯ. ಇಂತಹ ಭ್ರಷ್ಟ ವ್ಯವಸ್ಥೆಯಿಂದಾಗಿ ಬಡ ವರ್ತಕರು ಮಳಿಗೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಮರು ಟೆಂಡರ್‌ಗೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪಟ್ಟಣದಲ್ಲಿ ಹೆಚ್ಚು ಆದಾಯ ಬರುವ ಅಂಗಡಿ ಮಳಿಗೆಗಳ ಮಾಲೀಕರೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಣ ಪಡೆದುಕೊಂಡು ಹರಾಜಿನಲ್ಲಿ ಅತ್ಯಂತ ಕಡಿಮೆ ಬಾಡಿಗೆಗೆ ಸಿಗುವಂತೆ ನೋಡಿಕೊಂಡಿದ್ದಾರೆ. ಇನ್ನು ಬಡವರ್ತಕರಿಗೆ ಅವಶ್ಯಕವಾಗಿ ಸಿಗಬೇಕಾದ ಮಳಿಗೆಗಳು, 40ರಿಂದ 60 ಸಾವಿರ ರೂ.ಗಳಿಗೆ ಹರಾಜಾಗಿವೆ. ಹೆಚ್ಚು ಬಾಡಿಗೆಗೆ ಪಡೆದ ಮಳಿಗೆಗಳು ಕೆಲ ತಿಂಗಳಲ್ಲಿ ಮುಚ್ಚುವಂತ ಪರಿಸ್ಥಿತಿ ಇದೆ. ಈಗಾಗಲೇ ಅನೇಕ ಮಳಿಗೆಗಳು ಹರಜಾಗದೆ ಪಾಳು ಬಿದ್ದಿವೆ. ಎಲ್ಲವೂ ಅವೈಜ್ಞಾನಿಕವಾಗಿ ನಡೆದಿವೆ ಎಂದು ದೂರಿದರು.
40 ವರ್ಷಗಳಿಂದ ದಲಿತರು ಮಳಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಮೀಸಲಾಗಿರುವ ಮಳಿಗೆಗಳು ಪರಭಾರೆಯಾಗದಂತೆ ಎಚ್ಚರ ವಹಿಸಬೇಕು. ಹಣದ ಆಮಿಷ ತೋರಿಸಿ ಪರಭಾರೆಯ ಮೂಲಕ ಬೇರೆಯವರು ಮಳಿಗೆಗಳನ್ನು ಕಿತ್ತುಕೊಂಡರೆ ಪರಿಶಿಷ್ಟಜಾತಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಚ್.ಜೆ.ಪ್ರಕಾಶ್, ತಾಲೂಕು ಅಧ್ಯಕ್ಷ ಮುತ್ತಣ್ಣ ಇದ್ದರು.