ಮಳಲಿ ಗುಡ್ಡದಲ್ಲಿ ಅರಣ್ಯ ವನ

21gkn1-a-
Published on

ಗೋಕರ್ಣ: ಹತ್ತಿರದ ತೊರ್ಕೆ ಗ್ರಾಪಂನ ದೇವರಬಾವಿ-ಸಿದ್ಧೇಶ್ವರ ನಡುವಿನ ಮಳಲಿ ಗುಡ್ಡದಲ್ಲಿ ಅಪರೂಪದ ಅರಣ್ಯ ವನ ನಿರ್ಮಾಣ ವಾಗಲಿದೆ. ಈ ಪರ್ವತ ಪ್ರದೇಶದ 99 ಎಕರೆ ಪೈಕಿ 25 ಎಕರೆಯಲ್ಲಿ ಈ ಭಾಗದ ಮೊದಲ ಅರಣ್ಯ ವನ ಬೆಳೆಸಲಾಗುತ್ತಿದೆ.

ಈ ವನ ನಿರ್ಮಾಣ ಜಿಪಂ ಸದಸ್ಯ ಪ್ರದೀಪ ನಾಯಕ ಅವರ ಎರಡು ವರ್ಷದ ಸತತ ಪ್ರಯತ್ನದ ಫಲವಾಗಿದೆ. ಇದಕ್ಕಾಗಿ ಜಿಪಂ ಸಾಮಾಜಿಕ ಅರಣ್ಯೀಕರಣ ಯೋಜನೆಯಲ್ಲಿ 5 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಗೋಕರ್ಣ ಭಾಗದಲ್ಲಿ ಸಾವಿರಾರು ಎಕೆರ ಅರಣ್ಯ ಭೂಮಿಯಿದೆ. ಆದರೆ, ಇವುಗಳಲ್ಲಿನ ಹೆಚ್ಚಿನ ಭಾಗ ಸರ್ಕಾರ ನಿಷೇಧಿಸಿರುವ ಅಕೇಶಿಯಾ ಗಿಡಗಳಿಂದ ತುಂಬಿಕೊಂಡಿದೆ. ಇದೇ ಮೊದಲ ಬಾರಿಗೆ ಅಕೇಶಿಯಾ ಹೊರತಾದ ಗಿಡ ನೆಡುವ ಪ್ರಯತ್ನ ಇಲ್ಲಿ ನಡೆಯುತ್ತಿದೆ.

ಮಳಲಿ ಗುಡ್ಡದ ಈ ಪ್ರದೇಶ ಅನೇಕ ವರ್ಷಗಳಿಂದ ಸಂಪೂರ್ಣವಾಗಿ ಕುರುಚಲು ಗಿಡಗಳಿಂದ ತುಂಬಿಕೊಂಡು ಜನರು ಒಳ ಪ್ರವೇಶಿಸಲು ಸಾಧ್ಯವಾಗದಂತೆ ನಿಷ್ಪ್ರಯೋಜನವಾಗಿತ್ತು. ಈಗ ಈ ನೆಲವನ್ನು ಹಸನಾಗಿಸಿ ಬೇಲಿಯಿಂದ ರಕ್ಷಿಸಲಾಗಿದೆ.

ಇಲ್ಲಿ ಪ್ರಾಣಿ ಪಕ್ಷಿಗಳಿಗೆ ಸಹಕಾರಿಯಾಗುವ ಮುರುಗಲ, ಹಲಸು, ಮಾವು, ನೇರಳೆ, ಉಪ್ಪಾಗೆ ಮುಂತಾದ ಉಪಯುಕ್ತ ಮರ ಬೆಳೆಸುವ ಸಾಹಸ ಮಾಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಈ ವರ್ಷ 4 ಸಾವಿರ ಸಸಿ ನೆಡಲಾಗುತ್ತಿದೆ. ಈ ಪೈಕಿ 2 ಸಾವಿರ ಸಸಿ ನೆಡುವ ಕಾರ್ಯ ಈಗ ಮುಂದುವರಿದಿದೆ.

ಕಾರ್ಯಕ್ರಮ: ಜಿಪಂ ಸದಸ್ಯ ಪ್ರದೀಪ ನಾಯಕ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತೊರ್ಕೆ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಗೌಡ, ಕಾರ್ಯದರ್ಶಿ ವಿನಾಯಕ ನಾಯ್ಕ, ಸತೀಶ ಗೌಡ, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು ಮುಂತಾದವರಿದ್ದರು.

ಅರಣ್ಯ ಎಂದರೆ ಅಕೇಶಿಯಾ ಮಾತ್ರ ಎಂಬ ಪರಿಸ್ಥಿತಿ ಇಲ್ಲಿ ನಿರ್ವಣವಾಗಿದೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ಏನೂ ಪ್ರಯೋಜನವಿಲ್ಲ.ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸುವ ಅರಣ್ಯ ಮಾಯವಾಗಿ ಅವುಗಳು ಜನ ವಸತಿಯತ್ತ ನುಗ್ಗುವ ಅಸಹಾಯಕತೆ ಸೃಷ್ಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಿನೂತನ ಪ್ರಯತ್ನಕ್ಕೆ ಮುಂದಾಗಲಾಗಿದ್ದು ಇದಕ್ಕೆ ಡಿಎಫ್​ಒ ಉದಯ ನಾಯ್ಕ, ಆರ್​ಎಫ್​ಒ ಮೋಹನ ಬಿದರಿ ಮತ್ತು ಅರಣ್ಯ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಬೆಂಬಲ ಕೊಟ್ಟಿರುವುದು ಶ್ಲಾಘನೀಯ.| ಪ್ರದೀಪ ನಾಯಕ, ಜಿಪಂ ಸದಸ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net