

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು ಬೆಳೆಗಳನ್ನು ನಾಶ ಮಾಡುತ್ತಿವೆ.
ಕೊಡಗಿನ ಕಾಡಂಚಿನ ಗಡಿ ಗ್ರಾಮಗಳಲ್ಲಿರುವ ಜಮೀನಿಗಳಿಗೆ ಕಳೆದ ಎರಡು ದಿನಗಳಿಂದ ಆನೆಗಳು ಲಗ್ಗೆ ಇಡುತ್ತಿವೆ. ಭಾನುವಾರ ರಾತ್ರಿ ಪಾರಸನಹಳ್ಳಿ ಗ್ರಾಮದಲ್ಲಿ ಭತ್ತ, ಜೋಳ, ಅಡಕೆ, ಬಾಳೆ, ಕಾಫಿ ತೋಟಗಳಿಗೆ ನುಗ್ಗಿದ ಮೂರು ಕಾಡಾನೆಗಳು ಬೆಳೆ ಹಾನಿ ಮಾಡಿವೆ. ಸೋಮವಾರ ರಾತ್ರಿ ನೆಲಬಳ್ಳಿ ಭಾಗದಲ್ಲಿ ಜೋಳ ಮತ್ತಿತರ ಬೆಳೆಗಳನ್ನು ತುಳಿದು ನಾಶಪಡಿಸಿವೆ.
ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆ ಹೊರ ಬಂದು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಆನೆಗಳ ಕಾಟದಿಂದ ಬೇಸತ್ತು ಬೆಳೆ ಬೆಳೆಯುವುದನ್ನು ನಿಲ್ಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಾರಸನಹಳ್ಳಿ ರೈತ ಮೋಹನ್ ಅವಲತ್ತುಕೊಂಡಿದ್ದಾರೆ.
ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಪ್ರತಿನಿತ್ಯ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರೂ ರಾತ್ರಿ ವೇಳೆ ಆನೆಗಳು ದಾಳಿ ನಡೆಸುವುದು ನಿಂತಿಲ್ಲ. ಆನೆಗಳ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು. ಬೆಳೆ ಹಾನಿ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.