

ನಂಜನಗೂಡು: ತಾಲೂಕಿನ ಮಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬಿಜೆಪಿ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ ವಾರ ಸಂಘದ ನಿರ್ದೇಶಕರ ಚುನಾವಣೆ ನಡೆದಿತ್ತು. ಬಿಜೆಪಿ ಬೆಂಬಲಿತ 10 ನಿರ್ದೇಶಕರು ಜಯಭೇರಿ ಬಾರಿಸಿದ್ದರು. ಶನಿವಾರ ಸಂಘದ ಆವರಣದಲ್ಲಿ ಅಧ್ಯಕ್ಷರಾಗಿ ನಾಗರಾಜು, ಉಪಾಧ್ಯಕ್ಷರಾಗಿ ರಾಜಪ್ಪ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸಹಕಾರ ಇಲಾಖೆ ಸುಜಾತಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ನಾಗರಾಜು ಮಾತನಾಡಿ, ಸಂಘದ ಎರಡು ನಿರ್ದೇಶಕರ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆದು ಉಳಿದ ಹತ್ತು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಮುಂದಿನ ಐದು ವರ್ಷಗಳಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಉತ್ಪಾದಕರಿಗೆ ತಲುಪಿಸಲು ಕ್ರಮ ವಹಿಸುತ್ತೇನೆ. ಜತೆಗೆ ಸಂಘದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದ್ದು ಸಂಘದಲ್ಲಿಯೇ ಬಿಎಂಸಿ ಘಟಕವನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತೇನೆ ಎಂದರು.