

ಹನೂರು: ಮಲೆಮಹದೇಶ್ವರ ಬೆಟ್ಟದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿಸಬೇಕೆನ್ನುವುದು ನನ್ನ ಕನಸಾಗಿದ್ದು, ಅಭಿವೃದ್ಧಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಬುಧವಾರ ಜಿಲ್ಲಾ ಮಟ್ಟದ ರಸ್ತೆ ಹಾಗೂ ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿ ಮಲೆ ಮಹದೇಶ್ವರ ಬೆಟ್ಟ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮಾದಪ್ಪನ ದೇಗುಲವು ರಾಜ್ಯದಲ್ಲೇ ಹೆಚ್ಚು ಆದಾಯ ಗಳಿಸುವ ಪ್ರಸಿದ್ಧ ದೇಗುಲಗಳಲ್ಲಿ ಎರಡನೆಯದಾಗಿದೆ. ರಸ್ತೆ ಹದಗೆಟ್ಟಿರುವ ಕಾರಣ ಆಗಾಗ್ಗೆ ಅಪಘಾತಗಳಾಗುತ್ತಿವೆ. ಇದಕ್ಕೆ ಮುಕ್ತಿ ದೊರಕಿಸಿಕೊಡುವ ಉದ್ದೇಶದಿಂದ ರಸ್ತೆಯನ್ನು ಕೆಶಿಪ್ ಯೋಜನೆಯಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಡಿಪಿಆರ್ ಸಿದ್ಧವಾಗಿದೆ. ಮುಂದಿನ 2 ತಿಂಗಳೊಳಗೆ ಅನುಮೋದನೆ ಸಿಗಲಿದೆ. ಸದ್ಯಕ್ಕೆ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆಯನ್ನು ತಾತ್ಕಾಲಿಕವಾಗಿ ಅಭಿವೃದ್ಧಿಪಡಿಸುವ ಸಲುವಾಗಿ 4 ಕೋಟಿ ರೂ. ವೆಚ್ಚದಲ್ಲಿ ಹನೂರಿನಿಂದ ಕೌದಳ್ಳಿ, 4.95 ಕೋಟಿ ರೂ. ವೆಚ್ಚದಲ್ಲಿ ಕೌದಳ್ಳಿಯಿಂದ ತಾಳುಬೆಟ್ಟ ಹಾಗೂ 16.40 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು 15 ದಿನದೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಹರಕೆ ಹೊತ್ತಿದ್ದೇನೆ:
ನಂಜುಂಡಪ್ಪ ವರದಿ ಪ್ರಕಾರ ಚಾ.ನಗರ ಹಿಂದುಳಿದ ಜಿಲ್ಲೆ. ಹಾಗಾಗಿ ಅಭಿವೃದ್ಧಿಯಾಗಬೇಕಿದೆ. ಆದರೆ ಅಭಿವೃದ್ಧಿಗೆ ಸರ್ಕಾರದಿಂದ ಈವರೆಗೂ ವಿಶೇಷ ಅನುದಾನ ದೊರೆತಿಲ್ಲ. ಇದೀಗ ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಇದಕ್ಕೆ ಮಾದಪ್ಪನ ಆಶೀರ್ವಾದವಿದೆ. ಮಾದಪ್ಪನ ದಯೆಯಿಂದ ಸಮೃದ್ಧಿ ಕರುಣಿಸಿ ಜಿಲ್ಲೆ ಅಭಿವೃದ್ಧಿಯಾಗಲೆಂದು ಹರಕೆ ಹೊತ್ತಿದ್ದೇನೆ. ಈಡೇರಿಸುವಂತೆ ಆಶಿಸುತ್ತೇನೆ ಎಂದರು.
ತಿರುಪತಿ ಮಾದರಿ ಅಭಿವೃದ್ಧಿ:
ಮ.ಬೆಟ್ಟವನ್ನು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಸವಾಲಿನ ಕೆಲಸವಾಗಿದೆ. ಈ ದಿಸೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ತಿರುಪತಿಗೆ ಭೇಟಿ ನೀಡಿದ್ದು ಅಲ್ಲಿನ ಅಭಿವೃದ್ಧಿ ಹಾಗೂ ನಿರ್ವಹಣಾ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಲಾಗಿದೆ. ಹಾಗಾಗಿ ತಿರುಪತಿ ಮಾದರಿಯಲ್ಲೇ ಅಭಿವೃದ್ಧಿಪಡಿಸಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದಾಸೋಹ ಭವನ, ಮಹಾದ್ವಾರ ನಿರ್ಮಾಣದ ಭೂಮಿಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಅಮಿತ್ ಷಾ ಹೇಳಿಕೆ ಖಂಡನೀಯ:
ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಹಗುರವಾಗಿ ಮಾತನಾಡಿರುವುದು ಖಂಡನೀಯ. ಸಂವಿಧಾನ ಉಳಿಯಬೇಕಾದರೆ ಹಾಗೂ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಅವರು ಕ್ಷಮೆಯಾಚಿಸಿದರೆ ಗೊಂದಲ ಬಗೆಹರಿಯಲಿದೆ ಎಂದರು.
ಚಾಮುಲ್ ನಿರ್ದೇಶಕ ಮಹದೇವ ಪ್ರಸಾದ್, ಪಪಂ ಉಪಾಧ್ಯಕ್ಷ ಆನಂದ್, ಜಿಪಂ ಮಾಜಿ ಸದಸ್ಯ ಶಿವಮೂರ್ತಿ, ಗ್ರಾಪಂ ಸದಸ್ಯ ಚಿನ್ನವೆಂಕಟ, ಪಿಡಬ್ಲ್ಯುಡಿ ಎಇಇ ಚಿನ್ನಣ್ಣ , ಎಇ ಮಹೇಶ್, ಮುಖಂಡರಾದ ರಾಜುಗೌಡ, ಮಂಜೇಶ್, ವಿಜಯಕುಮಾರ್, ಅತೀಕ್, ಗುತ್ತಿಗೆದಾರ ವಾಲೆ ಮಹದೇವ ಇದ್ದರು.