

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರೂ ಒಳಹರಿವು ಹಾಗೂ ಹೊರಹರಿವು ಸಮಾನವಾಗಿ ಇರುವುದರಿಂದ ನದಿ ತೀರದ ಪರಿಸ್ಥಿತಿ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಆದರೆ, ಘಟಪ್ರಭಾ ನದಿಗೆ ಗುರುವಾರ ನೀರಿನ ಕಡಿಮೆ ಕಡಿಮೆ ಆಗಿತ್ತು ಎನ್ನುವಷ್ಟರಲ್ಲೆ ಮತ್ತೆ ಮಳೆ ಅಬ್ಬರ ಜಾಸ್ತಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಶುಕ್ರವಾರ ಸಂಜೆ ವೇಳೆಗೆ ಮತ್ತೆ ಪ್ರವಾಹ ಸ್ಥಿತಿ ಉಲ್ಭಣಗೊಳ್ಳುವ ಸಾಧ್ಯತೆ ಇದೆ.
ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಗುರುವಾರ ೧೨ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದಕ್ಕೆ ಮತ್ತೆ ಮೂರು ಸಾವಿರ ಕ್ಯೂಸೆಕ್ ಹೆಚ್ಚಿನ ನೀರು ಗುರುವಾರ ಸಂಜೆ ಬಿಡುಗಡೆ ಮಾಡಿದ್ದು, ಶುಕ್ರವಾರ ಸಂಜೆ ಇಲ್ಲವೇ ಶನಿವಾರ ಬೆಳಗ್ಗೆ ಬಾದಾಮಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕ ಉಂಟು ಮಾಡುವ ಸಾಧ್ಯತೆ ಇದೆ. ಸದ್ಯ ನೀರಿನ ಹರಿವು ಹೆಚ್ಚಾಗಿದ್ದರಿಂದ ಜಮೀನುಗಳಿಗೆ ನುಗ್ಗುವ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರು ೨೦ ಕ್ಯೂಸೆಕ್ ಗೂ ಅಽಕ ಬಂದಲ್ಲಿ ಗ್ರಾಮಗಳಿಗೆ ನುಗ್ಗಿ ಪ್ರವಾಹ ಸ್ಥಿತಿ ನಿರ್ಮಾಣವಾಗುವ ಅಪಾಯ ಇದೆ. ಸದ್ಯಕ್ಕೆ ಬಾದಾಮಿ ತಾಲೂಕಿನ ಗೋವನಕೊಪ್ಪ ಕಿರು ಸೇತುವೆ ಜಲಾವೃತವಾಗಿದ್ದು, ಹೆಬ್ಬಳ್ಳಿ ಭಾಗದಲ್ಲಿ ಜಮೀನುಗಳಿಗೆ ಬುಧವಾರಕ್ಕಿಂತ ಇಂದು ಹೆಚ್ಚಿನ ನೀರು ನುಗ್ಗಿರುವ ವರದಿಯಾಗಿದೆ.
ಘಟಪ್ರಭಾ ನದಿಗೆ ನೀರಿನ ಹರಿವು ೪೨ ಸಾವಿರ ಕ್ಯೂಸೆಕ್ ನಿಂದ ಇದೀಗ ೬೦ ಸಾವಿರಕ್ಕೆ ಏರಿಕೆ ಆಗಿದ್ದರಿಂದ ಮತ್ತೆ ಮುಧೋಳ ತಾಲೂಕಿನ ಮಿರ್ಜಿ, ಮಳಲಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಇಳಿಕೆ ಆಗಿದ್ದ ನೀರಿನ ಪ್ರಮಾಣ ಮತ್ತೆ ಹೆಚ್ಚಾಗುವ ಸಂಭವ ಇದೆ. ಹೀಗಾಗಿ ಅಲ್ಲೆಲ್ಲ ಆರಂಭಿಸಿರುವ ಕಾಳಜಿ ಕೇಂದ್ರಗಳು ಮತ್ತೆ ಮುಂದುವರೆಯಲಿವೆ. ೧೧ ಸೇತುವೆಗಳು ಮುಳುಗಡೆ ಆಗಿದ್ದು, ಅವುಗಳು ಮತ್ತಷ್ಟು ಪ್ರಮಾಣದಲ್ಲಿ ಮುಳುಗಡೆ ಆಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ನಿಲ್ಲದೇ ಇರುವುದು ಬಾಗಲಕೋಟೆ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗುತ್ತಲೇ ಇದೆ. ಗುರುವಾರ ಘಟಪ್ರಭಾ ನದಿ ತೀರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಇಳಕೆಯಾಗಿ ಜಲಾವೃತಗೊಂಡಿದ್ದ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆಗೆ ಇದೀಗ ಮತ್ತೆ ನೀರಿನ ಹರಿವು ಹೆಚ್ಚಾಗಿ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಜಲಾವೃತವಾಗುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.
ಕೃಷ್ಣಾ ನದಿಗೆ ಹಿಪ್ಪರಗಿ ಜಲಾಶಯದಿಂದ ಈಗಲೂ ಸಹ ೨.೯೬ ಲಕ್ಷ ಕ್ಯೂಸೆಕ್ ನೀರಿನ ಹರಿವು ಇದ್ದರೂ ಆಲಮಟ್ಟಿ ಜಲಾಶಯದಿಂದ ೩ ಲಕ್ಷ ಕ್ಯೂಸೆಕ್ ಹೊರಗೆ ಬಿಡುತ್ತಿರುವುದರಿಂದ ಜಮಖಂಡಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಹೆಚ್ಚಿನ ಅಪಾಯ ಇಲ್ಲದೇ ಕಳೆದ ನಾಲ್ಕÊೆದು ದಿನಗಳಿಂದ ಇರುವ ಪರಿಸ್ಥಿತಿ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.