

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿರಂತರವಾಗಿ ನಾಡವಿರೋಧಿ ಚಟುವಟಿಕೆ ಕೈಗೊಳ್ಳುತ್ತಿರುವ, ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸಬೇಕು. ಮರಾಠಿ ಪುಂಡರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ನಗರದ ಚನ್ನಮ್ಮ ವೃತ್ತದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು, ಸಂಸದರು, ಸಚಿವರು ತಮ್ಮ ಅಧಿಕಾರದ ಸ್ವಾರ್ಥ ಸಾಧನೆ, ಮತಬ್ಯಾಂಕ್‌ಗಾಗಿ ನಾಡವಿರೋಧಿಗಳ ರಕ್ಷಣೆ ಮಾಡುತ್ತಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿ ನಾಡವಿರೋಧಿ ಚಟುವಟಿಕೆ ಕೈಗೊಳ್ಳುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಬೆಳಗಾವಿಯಲ್ಲಿನ ಮರಾಠಿ ನಾಮಫಲಕ ತೆರವುಗೊಳಿಸಬೇಕು ಕಾರ್ಯಕರ್ತರು ಒತ್ತಾಯಿಸಿದರು.
22ರಂದು ಕರ್ನಾಟಕ ಬಂದ್: ಈಗಾಗಲೇ ಬೆಳಗಾವಿ ರಕ್ಷಣೆ, ಎಂಇಎಸ್ ನಿಷೇಧ, ಮಹದಾಯಿ ಯೋಜನೆ ಅನುಷ್ಠಾನ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತಾಯಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಕರೆ ಕೊಟ್ಟಿದ್ದೇವೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಲಾಗುವುದು. ಇದಕ್ಕೆ ಕನ್ನಡಿಗರು ಸ್ವಯಂ ಪ್ರೇರಣೆಯಿಂದ ಬೆಂಬಲಿಸಿ ಬಂದ್‌ನಲ್ಲಿ ಭಾಗವಹಿಸಬೇಕು.
ನಾಡು, ನುಡಿ, ಜಲ ವಿಷಯಗಳದಲ್ಲಿ ಜಾತ್ಯತೀತ, ಪಕ್ಷಾತೀತ ಹೋರಾಟ ಅತೀ ಮುಖ್ಯವಾಗಿದೆ. ಗಡಿಭಾಗದಲ್ಲಿನ ಕನ್ನಡಿಗರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿವಾರ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಅಧಿವೇಶನ ನಡೆಯಲು ಬಿಡುವುದಿಲ್ಲ: ಕನ್ನಡ ಸಂಘಟನೆಗಳ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ ಮಾತನಾಡಿ, ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿಲ್ಲ. ನಾಡದ್ರೋಹಿಗಳನ್ನು ಗಡಿಪಾರು ಮಾಡುವಂತೆ ಹೋರಾಟ ನಡೆಸಿದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಪರೋಕ್ಷವಾಗಿ ರಕ್ಷಿಸುತ್ತಿದೆ.
ಶೀಘ್ರವೇ ಎಂಇಎಸ್ ನಿಷೇಧ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ ಮಾತನಾಡಿದರು. ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ವಾಜೀದ ಹಿರೇಕುಡಿ, ಕಸ್ತೂರಿ ಬಾವಿ, ಅನಿಲ್ ದಡ್ಡಿ ಇತರರಿದ್ದರು.