ಕೆ.ಆರ್.ಪೇಟೆ: ಕಳೆದ ವಿಧಾನಸಭಾ ಚುನಾವಣೆ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷದವರಿಂದ ಹಣ ಪಡೆದಿದ್ದಾರೆ ಎಂಬ ಆಡಿಯೋ ಸಂಭಾಷಣೆ ನಡೆಸಿರುವ ಮನ್‌ಮುಲ್ ನಿರ್ದೇಶಕ ಹಾಗೂ ಜೆಡಿಎಸ್ ಮುಖಂಡ ಡಾಲು ರವಿ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರಲ್ಲಿ ನಾನೂ ಒಬ್ಬನಾಗಿದ್ದೆ. ಜೂ.19ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆಯೊಂದರಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ ಎಂಬುವರು ನನ್ನ ಘನತೆ ಹಾಗೂ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ನಾನು ಜೆಡಿಎಸ್ ಮುಖಂಡರಿಂದ 1 ಕೋಟಿ ರೂ. ಮತ್ತು ಒಂದು ಇನೋವಾ ಕಾರನ್ನು ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ.
ಇದೀಗ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನನ್ನ ಘನತೆಗೆ ಕುಂದು ತಂದಿದೆ. ನನ್ನ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡುವ ಮೂಲಕ ಮಾನಹಾನಿ ಮಾಡಿರುವ ಡಾಲು ರವಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪಟ್ಟಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.