

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ(ಉತ್ತರ ಕನ್ನಡ)
ತಾಲೂಕಿನ ಭಂಡಾರಿಕೇರಿ ಗ್ರಾಮದ ಹೊಸಗದ್ದೆಯಲ್ಲಿ ಚಿರತೆಯೊಂದು ರಾತ್ರಿ ದಾಳಿ ನಡೆಸಿ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಕಚ್ಚಿ ಬೀಸಾಡಿ ಹೋದ ಘಟನೆ ಶನಿವಾರ ಬೆಳಗಿನಜಾವ ನಡೆದಿದೆ.
ಹೊಸಗದ್ದೆಯ ಪಿ.ವಿ.ಹೆಗಡೆ ಅವರ ಮನೆ ಅಂಗಳದಲ್ಲಿದ್ದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿರುವ ಕುರಿತು ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳೆದ ಹಲವು ದಿನಗಳಿಂದ ಭಂಡಾರಿಕೇರಿ, ಸಂಪಗೋಡು, ಮುತ್ತಿಗೆ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವ ಕುರಿತು ಸಾರ್ವಜನಿಕರು ತಿಳಿಸಿದ್ದಲ್ಲದೇ ಸಿದ್ದಾಪುರ- ಹಾರ್ಸಿಕಟ್ಟಾ ರಸ್ತೆಯ ಕವಲಕೊಪ್ಪ-ಮುತ್ತಿಗೆ ಬಸ್ ನಿಲ್ದಾಣದ ಹತ್ತಿರ ಬೈಕ್ ಸವಾರರಿಗೆ ಕಾಣಿಸಿಕೊಂಡಿದೆ. ಅಲ್ಲದೇ ಭಂಡಾರಿಕೇರಿ-ಸAಪಗೋಡ ಗ್ರಾಮದ ಕೆಲವು ಮನೆಯ ಅಂಗಳಕ್ಕೆ ದಾಳಿ ನಡೆಸಿ ಐದಾರು ಸಾಕು ನಾಯಿಗಳನ್ನು ಎಳೆದುಕೊಂಡು ಹೋಗಿದೆ. ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ನಮಗೆ ನಿತ್ಯ ಸಂಚಾರ ಮಾಡುವುದಕ್ಕೆ ಆತಂಕ ಉಂಟಾಗಿದೆ ಎಂದು ಹೊಸಗದ್ದೆಯ ಪಿ.ವಿ.ಹೆಗಡೆ ಹೆಗಡೆ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ಆತಂಕದಲ್ಲಿರುವ ಜನತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ರಾತ್ರಿ ಸಂಚಾರ ನಡೆಸಿ ಚಿರತೆ ಸೇರಿದಂತೆ ಮತ್ತಿತರ ಕಾಡುಪ್ರಾಣಿಗಳಿಂದಾಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.