

ಸುಂಟಿಕೊಪ್ಪ: ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ನಿವಾಸಿ ಎಂ.ಎ.ಸತೀಶ್ ಎಂಬುವರ ಮನೆಯ ಬಳಿ ಕಾಡುಬೆಕ್ಕು ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿತು.
ಬುಧವಾರ ರಾತ್ರಿ ಮನೆಯ ಕೊಟ್ಟಿಗೆಗೆ ಬಂದ ಕಾಡುಬೆಕ್ಕು (ಪೆರ್ಪಣ) ಸಾಕು ಬೆಕ್ಕಿನೊಂದಿಗೆ ಕಾದಾಟಕ್ಕಿಳಿದಿದೆ. ನಂತರ ಕೊಟ್ಟಿಗೆ ಒಳಗೆ ನುಸುಳಿ ಸದ್ದು ಮಾಡತೊಡಗಿತು. ಅದನ್ನು ಕಂಡ ಮನೆಯವರು ಹುಲಿ ಅಥವಾ ಚಿರತೆ ಮರಿ ಇರಬೇಕು ಎಂದು ಭಯಗೊಂಡಿದ್ದರು. ಸತೀಶ್ ಅವರ ಪತ್ನಿ ಸೆಲ್ವಿ ಉರುಗ ತಜ್ಞ ಪಿ. ಬಾಲಚಂದ್ರ ಅವರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಾಲಚಂದ್ರ ಕಾಡುಬೆಕ್ಕನ್ನು ಸುರಕ್ಷಿತವಾಗಿ ಹಿಡಿದರು. ನಂತರ ಕುಶಾಲನಗರ ಆರಣ್ಯ ಇಲಾಖೆ ಸಿಬ್ಬಂದಿ ಉಮೇಶ್ ಅವರಿಗೆ ಮಾಹಿತಿ ನೀಡಿದರು. ಬಳಿಕ ಬೆಕ್ಕನ್ನು ಆನೆಕಾಡು ಅರಣ್ಯಕ್ಕೆ ಬಿಡಲಾಯಿತು.