ಮನೆಗಳ ದುರಸ್ತಿಗೆ ಅರಣ್ಯ ಇಲಾಖೆಯಿಂದ ಅಡಚಣೆ

Sirsi 1
Published on

ವಿಜಯವಾಣಿ ಸುದ್ದಿಜಾಲ ಶಿರಸಿ: ಅರಣ್ಯ ಅತಿಕ್ರಮಣ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಅಲ್ಲಿನ ಮನೆಗಳ ದುರಸ್ತಿಗೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವುದನ್ನು ವಿರೋಧಿಸಿ ಅತಿಕ್ರಮಣದಾರರು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್)ಅನ್ನು ಬುಧವಾರ ತರಾಟೆಗೆ ತೆಗೆದುಕೊಂಡರು.

ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಭಟ್ಕಳ ತಾಲೂಕಿನ 50ಕ್ಕೂ ಹೆಚ್ಚು ಅತಿಕ್ರಮಣದಾರರು ಕಚೇರಿಗೆ ಆಗಮಿಸಿ, ಹಲವು ವರ್ಷಗಳಿಂದ ವಾಸವಿದ್ದ ಮನೆ ಬೀಳುವ ಹಂತ ತಲುಪಿದೆ. ದುರಸ್ತಿಗೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ನಿತ್ಯವೂ ಆತಂಕದಲ್ಲಿಯೇ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಅಧ್ಯಕ್ಷ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಹಲವು ಪ್ರಕರಣಗಳಲ್ಲಿ ಅರಣ್ಯ ಹಕ್ಕು ಸಮಿತಿಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಆದಾಗ್ಯೂ ಮನೆ ನೆಲಸಮಗೊಳಿಸುವ ಮಾತನ್ನು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಿರುವುದು ಸರಿಯಲ್ಲ. ಇಂತಹ ಕಾನೂನು ವಿರೋಧಿ ಕ್ರಮ ಖಂಡನೀಯ ಎಂದರು.

ಇಲಾಖೆಯಿಂದ ಜಿಪಿಎಸ್ ಆದ ಜಾಗದಲ್ಲಿಯೂ ದೌರ್ಜನ್ಯ ನಡೆಯುತ್ತಿದೆ. ದಾಖಲೆ ಕೇಳದೇ ನಿವಾಸಿಗಳನ್ನು ಹೊರ ಹಾಕಲಾಗುತ್ತಿದೆ. ಬೆಳಕೆಯಲ್ಲಿ ಅರಣ್ಯ ವೀಕ್ಷಕ್ಷರು ಅರಣ್ಯ ಜಾಗದಲ್ಲಿ ಹೊಸದಾಗಿ ಮನೆ ನಿರ್ವಿುಸಿದ್ದಾರೆ. ಅವರ ವಿರುದ್ಧ ಕ್ರಮವಹಿಸದ ಇಲಾಖೆ ಬಡ ಜನರ ವಿರುದ್ಧ ದರ್ಪ ತೋರುತ್ತಿದೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಿಸಿಎಫ್ ಯತೀಶಕುಮಾರ, ಮಾನವೀಯ ನೆಲೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಯೋಚಿಸಬೇಕು. ಈ ಕುರಿತು ಸಂಬಂಧಪಟ್ಟವರಿಗೆ ಸೂಚಿಸಿ, ದೌರ್ಜನ್ಯ ನಡೆಸದಂತೆ ಎಚ್ಚರಿಸಲಾಗುವುದು. ಹೊಸ ಅತಿಕ್ರಮಣವಾಗದಂತೆ ಜನರೇ ತಡೆಯಬೇಕು ಎಂದರು. ಈ ವೇಳೆ ಪ್ರಮುಖರಾದ ಜಿ.ಎಂ. ಶೆಟ್ಟಿ, ದೇವರಾಜ ಮರಾಠೆ, ಇಬ್ರಾಹಿಂ ಸಾಬ್ ಹಾಗೂ ಇತರರು ಇದ್ದರು.

ಅರಣ್ಯ ಸಿಬ್ಬಂದಿಗೆ ಕಾನೂನು ಜ್ಞಾನದ ಕೊರತೆಯಿದೆ. ಹೀಗಾಗಿ ಕಾನೂನು ಬಾಹಿರವಾಗಿ ಅತಿಕ್ರಮಣದಾರರ ಮನೆಗೆ ನುಗ್ಗುವುದು, ದೌರ್ಜನ್ಯ ನಡೆಸುವ ಕಾರ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಅವರು ಸದನದಲ್ಲಿಯೇ ಅತಿಕ್ರಮಣ ಜಾಗದಲ್ಲಿನ ಮನೆಗಳ ದುರಸ್ತಿಗೆ ಅವಕಾಶ ನೀಡುವಂತೆ ಹೇಳಿದ್ದಾರೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಅವರ ಮಾತಿಗೆ ವ್ಯತಿರಿಕ್ತವಾಗಿ ನಡೆಯುತ್ತಿದ್ದಾರೆ. | ರವೀಂದ್ರ ನಾಯ್ಕ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಜಿಲ್ಲಾ ಅಧ್ಯಕ್ಷ

ಅರಣ್ಯ ಹಕ್ಕು ಕಾಯ್ದೆಯಡಿ ಜಿಪಿಎಸ್ ಆದ ಜಾಗದಲ್ಲಿರುವ ಮನೆಗಳ ದುರಸ್ತಿಗೆ ಯಾವುದೇ ಅಡ್ಡಿಪಡಿಸದಂತೆ ಸೂಚಿಸಲಾಗುವುದು. ಒಕ್ಕಲೆಬ್ಬಿಸುವ ಕಾರ್ಯವನ್ನೂ ಮಾಡದಂತೆ ನಿರ್ದೇಶನ ನೀಡಲಾಗುವುದು. | ಯತೀಶ ಕುಮಾರ ಸಿಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net