

ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆ ಸುರಿಯುತ್ತಿರುವ ಪುಷ್ಯ ಮಳೆಯ ಅಬ್ಬರ ಸೋಮವಾರವೂ ಮುಂದುವರಿದಿದೆ. ಬನ್ನೂರು ಗ್ರಾಮದ ಜನತಾ ಕಾಲನಿಯ ಲತಾ ರವೀಂದ್ರ ಎಂಬುವರ ಮನೆ ಹಿಂಬದಿಯ ಮೇಲ್ಛಾವಣಿ ಕುಸಿದು ಮನೆಗೆ ಹಾನಿಯಾಗಿದೆ.
ದೇವದಾನ ಗ್ರಾಪಂ ವ್ಯಾಪ್ತಿಯ ಸಂಗಮೇಶ್ವರಪೇಟೆಯ ಸುರೇಶ್‌ಗೌಡ ಎಂಬುವರ ಮನೆಗೆ ಮರ ಉರುಳಿ ಹಾನಿಯಾಗಿದೆ.
ಭದ್ರಾನದಿಯ ಆಸುಪಾಸಿನ ತೋಟಗಳಲ್ಲಿ ನದಿಯ ನೀರು ಸ್ವಲ್ಪ ಪ್ರಮಾಣದಲ್ಲಿ ಬಂದು ನಿಂತಿತ್ತು. ಪಟ್ಟಣದ ಸಂತೆ ಮಾರ್ಕೆಟ್ ಬಳಿಯ ಸಂತೆ ಮಾರುಕಟ್ಟೆ ಸಂಕೀರ್ಣಕ್ಕೆ ಡೋಬಿ ಹಳ್ಳದ ನೀರು ನುಗ್ಗಿತ್ತು. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದಾರೆ.