ಮನೆ ಬಾಗಿಲಿಗೆ ತರಕಾರಿ, ದಿನಸಿ ಸಾಮಗ್ರಿ

28sirsi4
Published on

ಶಿರಸಿ: ನಗರದ ವಿವಿಧ ವಾರ್ಡ್​ಗಳಲ್ಲಿ ಮನೆ ಬಾಗಿಲಿಗೆ ತರಕಾರಿ, ಹಾಲು, ದಿನಸಿ ಸಾಮಗ್ರಿಗಳನ್ನು ಸರಬರಾಜು ಮಾಡಲು ತಾಲೂಕು ಆಡಳಿತ ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಶನಿವಾರದಿಂದ ಅಧಿಕೃತವಾಗಿ ಶುದ್ಧ ಕುಡಿಯುವ ನೀರು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು, ಜನರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ವ್ಯಾಪಾರಿಗಳಿಗೆ ಅವಕಾಶ ನೀಡಿದ್ದು, ಮನೆಮನೆಗೂ ದಿನಸಿ, ತರಕಾರಿ ಪೂರೈಸುವಂತೆ ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ. ಕೆಲವೆಡೆ ಪೊಲೀಸ್ ಸಿಬ್ಬಂದಿ ಸಹಕಾರದಲ್ಲಿ ದಿನಸಿ ಗಾಡಿಗಳು ದಿನಸಿ ವಿತರಿಸುತ್ತಿವೆ.

ನಗರದ ಕೆಲವೆಡೆ ತರಕಾರಿ ವ್ಯಾಪಾರಸ್ಥರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಪಡೆಯುತ್ತಿದ್ದಾರೆ ಎಂದು ಜನರು ವಾಗ್ವಾದ ನಡೆಸಿದ ಘಟನೆಗಳು ಸಹ ಜರುಗಿವೆ. ಗ್ರಾಹಕರು ದಿನಸಿ ಸಾಮಗ್ರಿಗಳಿಗೆ ಕರೆ ಮಾಡುತ್ತಿದ್ದಾರೆ. ಕೆಲವರು ಸಾಮಗ್ರಿಗಳ ದರವನ್ನು ಕೇಳಿ ದುಬಾರಿ ಆಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಿಂದಲೂ ಸಾಮಗ್ರಿಗಳಿಗೆ ಕರೆ ಬರುತ್ತಿದ್ದು, ಇನ್ನಷ್ಟು ಸಾಮಗ್ರಿಗಳನ್ನು ಗ್ರಾಮೀಣ ಭಾಗಕ್ಕೆ ಕಳುಹಿಸುವ ಅನಿವಾರ್ಯತೆ ಇದೆ ಎಂದು ಕಿರಾಣಿ ಅಂಗಡಿಯ ಮಾಲೀಕರು ಹೇಳುತ್ತಿದ್ದಾರೆ.

144 ಕಲಂ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರ ಓಡಾಟ ಸಂಪೂರ್ಣವಾಗಿ ನಿಂತಿಲ್ಲ. ಹಳ್ಳಿಯಲ್ಲಿರುವ ದಿನಸಿ ಅಂಗಡಿಗಳಲ್ಲಿ ಸಾಮಗ್ರಿಗಳು ಸಿಗುತ್ತಿಲ್ಲ. ಕೃಷಿ ಕುಟುಂಬದವರು ಹೆಚ್ಚಾಗಿ ವಾರದ ಸಂತೆ ಮಾಡುತ್ತಾರೆ. ಆದರೆ, ವಾರದ ಸಂತೆಯೂ ರದ್ದಾಗಿದ್ದರಿಂದ ಸಾಮಗ್ರಿಗಳ ಅವಶ್ಯಕತೆ ತೀರಾ ಇದೆ. ಹೀಗಾಗಿ ಗ್ರಾಮೀಣ ಭಾಗಕ್ಕೂ ಅಗತ್ಯ ದಿನಸಿ ಪೂರೈಸಲು ತಾಲೂಕು ಆಡಳಿತ ಕ್ರಮವಹಿಸಿದೆ.

ಗ್ರಾಮೀಣ ಭಾಗದಲ್ಲಿ ದಿನಸಿ ಸಾಮಗ್ರಿ ಪೂರೈಕೆ ಮಾಡುವ ಕುರಿತು ಗ್ರಾಮ ಪಂಚಾಯ್ತಿ ಪಿಡಿಒಗಳ ಸಭೆ ನಡೆಸಲಾಗಿದೆ. ಅಂಗಡಿಗಳನ್ನು ತೆರೆಯದೇ ವಾಹನದ ಮೂಲಕ ಸಾಮಗ್ರಿ ಪೂರೈಸಲು ತಿಳಿಸಲಾಗಿದೆ. ನಿಗದಿಪಡಿಸಿದ ವಾಹನಗಳಿಗೆ ಪಾಸ್ ವಿತರಣೆ ಮಾಡಲಾಗಿದ್ದು, ಅಗತ್ಯ ದಿನಸಿ ಪೂರೈಕೆ ಆಗುತ್ತಿದೆ.| ಡಾ.ಈಶ್ವರ ಉಳ್ಳಾಗಡ್ಡಿ ಉಪವಿಭಾಗಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net