

ಮಾಗಡಿ : ದೀಪೋತ್ಸವ ಮನುಷ್ಯನ ಪರಿವರ್ತನೆಗೆ ನಾಂದಿ ಎಂದು ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಕಂಚುಗಲ್ಲು ಬಂಡೇಮಠದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ತಿಕ ಮಾಸದ ದೀಪೋತ್ಸವ ಮತ್ತು ಧಾರ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ತಿಕ ದೀಪದಂತೆ ಮನುಷ್ಯನ ಬದುಕಿನಲ್ಲಿರುವ ಸಂಪೂರ್ಣ ಕತ್ತಲೆ ತೊಳೆದು ಹೊಸಭರವಸೆ ಮೂಡಲಿ. ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದು ಸಾಂಕೇತಿಕ. ಮನುಷ್ಯ ಬದುಕಿನಲ್ಲಿ ಬೆಳಕು ತಂದುಕೊಳ್ಳಬೇಕು ಎಂದು ಸುಖ ಸಂತೋಷವನ್ನು ಹುಡುಕಿಕೊಂಡು ಹೋಗುತ್ತೇವೆ. ಆದರೆ ನಮ್ಮ ಮನಸ್ಸಿನಲ್ಲಿಯೇ ಒಳ್ಳೆಯ ಗುಣ ಬೆಳೆಸಿಕೊಂಡು ಕೆಟ್ಟ ಗುಣವನ್ನು ಕೈ ಬಿಟ್ಟಾಗ ಅದೇ ಮನುಷ್ಯನಲ್ಲಿ ದೊಡ್ಡ ದೀಪ ಹಚ್ಚಿದಂತಾಗುತ್ತದೆ ಎಂದರು.
ಸನಾತನ ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ತನ್ನದೆಯಾದ ವೈಶಿಷ್ಟ್ಯ ಹೊಂದಿವೆ. ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯ ಬದುಕಲು ಶಾಂತಿ ಅವಶ್ಯಕವಾಗಿದೆ, ಸುಖ ಶಾಂತಿ ಬಯಸುವ ಮನುಷ್ಯ ಆ ದಾರಿಯಲ್ಲಿ ನಡೆಯಬೇಕಾಗುತ್ತದೆ. ನುಡಿ ಮತ್ತು ನಡೆ ಒಂದಾಗಿ ಸತ್ಕಾರ್ಯದಲ್ಲಿ ತೊಡಗಿದರೆ ಜಯದ ಬುತ್ತಿ ನಿಶ್ಚಿತ, ಆಡುವ ಮಾತು ಒಂದು, ನಡೆಯುವ ದಾರಿ ಇನ್ನೊಂದಾದರೆ ಬದುಕಿನಲ್ಲಿ ನೆಮ್ಮದಿ ಕಾಣಲಾಗದು. ಅಧ್ಯಾತ್ಮದ ಅನುಸಂಧಾನದಿಂದ ನೆಲೆ ಬೆಲೆ ಎರಡೂ ದೊರಕುತ್ತದೆ. ವ್ಯಕ್ತಿ ಪರಿಪೂರ್ಣ ಯಶಸ್ಸು ಪಡೆಯಲು ಅವನಲ್ಲಿರುವ ಶಿಸ್ತುಕಾರಣವಾಗಿರುತ್ತದೆ ಎಂದರು.
ಕಂಚುಗಲ್ಲು ಬಂಡೇಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಕತ್ತಲೆ ನಂತರ ಬೆಳಕು, ಬೆಳಕಿನಂತರ ಕತ್ತಲೆ ಬರುವುದು ಸಹಜ, ಅದರಂತೆ ಸುಖ ದುಃಖಗಳು ಬರುತ್ತದೆ ಎಂಬುದನ್ನು ಮರೆಯಬಾರದು, ಭೌತಿಕ ಸಂಪತ್ತು ಬೆಟ್ಟದಷ್ಟಿದ್ದರೂ ಶಾಶ್ವತವಲ್ಲ, ಸತ್ಯ ಧರ್ಮವೇ ನಿಜವಾದ ಸಂಪತ್ತು, ಆಧ್ಯಾತ್ಮಿಕ ಚಿಂತನೆಗಳು, ಶಾಂತಿ ನೆಮ್ಮದಿಯ ಮೂಲ. ಅಂತರಂಗದ ಬೆಳಕಿಗಿಂತ ಬಹಿರಂಗ ಬೆಳಕೇ ಹೆಚ್ಚೆಂದು ಮನುಷ್ಯ ತಿಳಿಯುತ್ತಾನೆ, ಮನುಷ್ಯನಿಗೆ ಅಧಿಕಾರ ಸಂಪತ್ತು ಮತ್ತು ಕೀರ್ತಿಯ ಹುಚ್ಚು ಹೆಚ್ಚಿದೆ. ಇದರಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿದೆ ಎಂದರು.
ದೀಪೋತ್ಸವ ಪ್ರಯುಕ್ತ ಶ್ರೀ ಶಿವರುದ್ರ ಮಹಾಸ್ವಾಮಿ ಅವರ ಮೂಲ ಗದ್ದುಗೆಗೆ ಏಕಾದಶ ರುದ್ರಾಭಿಷೇಕ, ಶ್ರೀಮಹಾಮೃತ್ಯುಂಜಯ ಪೂಜೆ, ಹೂವಿನ ಅಲಂಕಾರ ಮಾಡಲಾಗಿತ್ತು.
ಸಿದ್ದಗಂಗೆ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ವಿಜಯಪುರ ಬಸವ ಕಲ್ಯಾಣ ಮಠದ ಕಿರಿಯ ಶ್ರೀ ಸದಾಶಿವ ಸ್ವಾಮೀಜಿ, ಗುರುವಣ್ಣದೇವರ ಶ್ರೀ ಮಠದ ನಂಜುಂಡ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಗದ್ದುಗೆ ಮಠದ ಮಹಂತ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಸ್ವಾಮಿ, ಗುಮ್ಮಸಂದ್ರ ಮಠದ ಡಾ. ಚಂದ್ರಶೇಖರ ಸ್ವಾಮೀಜಿ, ಶಾಸಕ ಶ್ರೀನಿವಾಸ್, ಹರ್ತಿ ಸಿದ್ದಪ್ಪ, ಮಾಜಿ ಉಪಮೇಯರ್ ಬಿ.ಎಸ್. ಪುಟ್ಟರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ತಟ್ಟೆಕೆರೆ ಶರ್ಮ, ರಮೇಶ್, ಕಾಂತರಾಜು, ಶಿವಕುಮಾರ್, ಜ್ಯೋತಿಲಿಂಗಪ್ಪ ಇತರರು ಇದ್ದರು.