ಮನದೊಳಗೆ ತುಂಬಿದ ಮಹೇಶ್ವರ

21KMT2a
Published on

ಕುಮಟಾ: ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿ ಉತ್ಸವವನ್ನು ಭಕ್ತರು ಅತ್ಯಂತ ಶೃದ್ಧೆ, ಭಕ್ತಿ, ನಿಷ್ಠೆಯಿಂದ ಆಚರಿಸಿ ಶಿವ ಮಂದಿರಗಳಲ್ಲಿ ಪೂಜೆ ಸಲ್ಲಿಸಿ ಪುಣ್ಯಪರ್ವದ ಶ್ರೇಯೋಭಾಗಿಗಳಾದರು.

ದಟ್ಟ ಅರಣ್ಯ ಪರಿಸರದ ನಡುವಿನ ಪ್ರಯಾಸದ ತಾಣ ಯಾಣದಲ್ಲಿ ಬೃಹತ್ ಶಿಲಾಶಿಖರ ಹಾಗೂ ಗುಹಾಂತರ್ಗತ ಭೃೆರವೇಶ್ವರನ ದರ್ಶನಕ್ಕಾಗಿ ಭಕ್ತಾದಿಗಳ ದಂಡು ಬೆಳಿಗ್ಗೆಯಿಂದಲೇ ಸಾಲುಗಟ್ಟಿತ್ತು. ಈ ಬಾರಿ ಯಾಣಕ್ಕೆ ಘಟ್ಟದ ಮೇಲಿನ ತಾಲೂಕುಗಳು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಮಂದಿರದ ಆಡಳಿತ ಸಮಿತಿ ಭಕ್ತರಿಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದರು.

ಗೋಕರ್ಣದ ಆತ್ಮಲಿಂಗದ ಭಾಗವೆಂದೇ ಪ್ರತೀತಿ ಇರುವ ಧಾರೇಶ್ವರದಲ್ಲಿ ಧಾರಾನಾಥ ದೇವರ ದರ್ಶನ ಪಡೆದ ಸಹಸ್ರಾರು ಭಕ್ತಾದಿಗಳು ಅಭಿಷೇಕಗೈದು ಪ್ರಸಾದ ಭಾಜನರಾದರು.

ಪಟ್ಟಣದ ಕುಂಭೇಶ್ವರ, ಕಲ್ಲಬ್ಬೆಯ ನಂದಿಕೇಶ್ವರ, ಕೋನಳ್ಳಿ ಕೋನೇಶ್ವರ, ಅಂತ್ರವಳ್ಳಿಯ ಸದಾಶಿವ, ಕತಗಾಲದ ಮಹೇಶ್ವರ ಇನ್ನಿತರ ನೂರಾರು ಶಿವ ಮಂದಿರಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ಪೂಜೆ ಹಾಗೂ ಜಾಗರಣೆ ನಡೆಯಿತು. ಶಿವರಾತ್ರಿಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೊಲನಗದ್ದೆಯ ಕಡ್ಲೆ ಸಮುದ್ರ ತೀರದಲ್ಲಿ ಸ್ಥಳೀಯ ಯುವಕರ ಸಹಯೋಗದಲ್ಲಿ ಮರಳಿನಲ್ಲಿ ಬೃಹತ್ ಶಿವಮೂರ್ತಿ ನಿರ್ವಿುಸಲಾಗಿದ್ದು ಸಹಸ್ರಾರು ನೋಡುಗರ ಆಕರ್ಷಣೆಯ ಕೇಂದ್ರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net