ಮದ್ಯದಂಗಡಿ ಮುಂದೆ ಗ್ರಾಹಕರ ಪ್ರತಿಭಟನೆ

04 yelandur 01
Published on

ಯಳಂದೂರು: ಪಟ್ಟಣದ ಎಂಆರ್‌ಪಿ ವೈನ್ ಸ್ಟೋರ್‌ನಲ್ಲಿ ಹೆಚ್ಚಿನ ಬೆಲೆಗೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಹಕರು ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಹದೇಶ್ವರ ಚಿತ್ರಮಂದಿರದ ಬಳಿ ಇರುವ ಶ್ರೀರಂಗ ಎಂಆರ್‌ಪಿ ವೈನ್ಸ್‌ನಲ್ಲಿ ಹೊಂಗನೂರು ಗ್ರಾಮದ ರಂಗಸ್ವಾಮಿ ಎಂಬುವರು ರಾಯಲ್ ಚಾಲೆಂಜರ್ ಸ್ಟ್ರಾಂಗ್ ಪ್ರೀಮಿಯಮ್ ಬಿಯರ್-650 ನ್ನು ಖರೀದಿಸಿದ್ದಾರೆ. ಇದಕ್ಕೆ ಎಂಆರ್‌ಪಿ ದರ 125 ರೂ.ಇದೆ. ಆದರೆ ಅಂಗಡಿಯವರು 145 ರೂ.ಗಳನ್ನು ಪಡೆದಿದ್ದಾರೆ. ಈ ಬಗ್ಗೆ ಅಂಗಡಿಯವರನ್ನು ವಿಚಾರಿಸಿದಾಗ ಈಗ ದರ ಹೆಚ್ಚಾಗಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ. ಆದರೆ ಬಾಟಲ್ ಮೇಲೆ 120 ರೂ. ದರ ಇದೆ. ಹಾಗಾಗಿ ಇಷ್ಟೇ ಹಣವನ್ನು ಪಡೆದುಕೊಳ್ಳಬೇಕು ಎಂದು ಹೊಂಗನೂರು, ಹೊನ್ನೂರು, ಯರಗಂಬಳ್ಳಿ, ಯಳಂದೂರು, ಯರಿಯೂರು, ಗಂಗವಾಡಿ ಹಾಗೂ ಪಟ್ಟಣದ ಗ್ರಾಹಕರು ದಿಢೀರ್ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.

ನಿಯಮಗಳ ಉಲ್ಲಂಘನೆ, ಆರೋಪ: ಈ ವೈನ್‌ಸ್ಟೋರ್‌ನಲ್ಲಿ ಪಾರ್ಸೆಲ್ ಮಾತ್ರ ನೀಡಬೇಕು, ಅಲ್ಲೇ ಕುಡಿಯುವಂತಿಲ್ಲ ಎಂಬ ನಿಯಮವಿದೆ. ಆದರೆ ಇಲ್ಲೇ ಕುಡಿಯುತ್ತಾರೆ. ಇದರ ಬಳಿಯಲ್ಲೇ ನಡಮೇಗಲಮ್ಮ ದೇಗುಲವಿದೆ. ಇದು ಅಪಘಾತ ವಲಯವಾಗಿದೆ. ರಾತ್ರಿ ವೇಳೆ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಲಾಗುತ್ತದೆ. ಇಲ್ಲೇ ತಿಂಡಿ, ತಿನಿಸುಗಳ ಅಂಗಡಿಗಳು, ತಳ್ಳುಗಾಡಿಗಳು ಇದ್ದು ಸಂಜೆಯಾದರೆ ಇಲ್ಲಿ ಜನಜಂಗುಳಿ ನರೆಯುತ್ತದೆ. ಈ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪರಿಶಿಷ್ಟ ಜಾತಿ, ವರ್ಗಗಳ ಹಿತರಕ್ಷಣ ಸಭೆಯಲ್ಲಿ ಹಲವು ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಬಕಾರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸುತ್ತಿಲ್ಲ. ಅಲ್ಲದೆ ಪಟ್ಟಣದ ಬಳೇಪೇಟೆಯ ಸರ್ಕಲ್‌ನಲ್ಲೂ ಎರಡು ಅಂಗಡಿಗಳಿದ್ದು ಇದನ್ನೂ ಬೇರೆಡೆ ಸ್ಥಳಾಂತರಿಸಬೇಕು. ನಿಗದಿತ ಬೆಲೆಗಿಂತ ಹೆಚ್ಚು ಬೆಲೆಯಲ್ಲಿ ಖರೀದಿ ಮಾಡುವವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ಈ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಅಲ್ಲೇ ಕುಡಿಯುವುದನ್ನು ನಿಷೇಧಿಸಲು ಕ್ರಮ ವಹಿಸಬೇಕು ಎಂದು ಯರಗಂಬಳ್ಳಿ ಗ್ರಾಮದ ರಾಮಕೃಷ್ಣ, ನಾಗರಾಜು ಸೇರಿದಂತೆ ಅನೇಕರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net