ಶನಿವಾರಸಂತೆ: ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಎಪಿಸಿಎಂಎಸ್ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯಲು ತಯಾರಿ ನಡೆಸುತ್ತಿರುವ ಕುರಿತು ಬೈಪಾಸ್ ರಸ್ತೆ ನಿವಾಸಿಗಳು, ಸ್ತ್ರೀ ಶಕ್ತಿ ಸಂಘಟನೆ, ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ತ್ರೀ ಶಕ್ತಿ ಸಂಘಟನೆ ಮತ್ತು ಮಹಿಳೆಯರ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಜಿ.ಡಿ.ದಿವ್ಯಾ, ಮೈತ್ರಿ, ರೇಣುಕಾ, ಲಾವಣ್ಯಾ ಅವರು, ಬೈಪಾಸ್ ರಸ್ತೆಯಲ್ಲಿ ಮದ್ಯದಂಗಡಿ ತೆರೆದರೆ ಮಹಿಳೆಯರು, ಮಕ್ಕಳು ಓಡಾಡಲು ಆಗದಂತಹ ವಾತಾವರಣ ನಿರ್ಮಾಣವಾಗುತ್ತದೆ. ಇದು ಸಾರ್ವಜನಿಕರು ಓಡಾಡುವ ಸ್ಥಳವಾಗಿದೆ. ಮದ್ಯದಂಗಡಿ ತೆರೆಯಬೇಕಾದರೆ ಸರ್ಕಾರ ಸಂಬಂಧಪಟ್ಟ ಗ್ರಾಪಂನವರು ರಸ್ತೆಯಿಂದ 220 ಮೀಟರ್ ದೂರದಲ್ಲಿ ತೆರೆಯಲು ಅವಕಾಶ ನೀಡುತ್ತದೆ. ಆದರೆ, ಇಲ್ಲಿ ಕೇವಲ ರಸ್ತೆಯಿಂದ 166 ಮೀಟರ್ ದೂರದಲ್ಲಿ ತೆರೆಯಲು ಸಂಬಂಧಪಟ್ಟ ಗ್ರಾಪಂ ಸ್ಥಳ ಪರಿಶೀಲಿಸದೆ ಎನ್‌ಒಸಿ ಕೊಟ್ಟಿದೆ.
ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಈ ಕುರಿತು ಗ್ರಾಪಂಗೆ ದೂರು ನೀಡಿದ್ದೇವೆ. ಹೀಗಿದ್ದರೂ ಅವಕಾಶ ಕೊಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ಅವರು ನೀಡಿರುವ ಎನ್‌ಒಸಿ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಮಹಿಳೆಯರು, ಸ್ತ್ರೀ ಶಕ್ತಿ ಸಂಘಟನೆ ಮತ್ತು ಸಾರ್ವಜನಿಕರು ಪ್ರತಿಭಟನೆ ಮೂಲಕ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.