ಮದ್ಯ ವಸ್ಯನಕ್ಕೆ ಮಕ್ಕಳ ಶಿಕ್ಷಣ ಹಾಳು

22M.D.R.6
Published on

ಮದ್ದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಹಲವು ಕುಟುಂಬಗಳಿಗೆ ಬೆಳಕಾಗಿರುವುದು ಉತ್ತಮ ಬೆಳವಣಿಗೆ ಎಂದು ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್ ತಿಳಿಸಿದರು.

ಪಟ್ಟಣದಲ್ಲಿ ಶೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಆಯೋಜಿಸಿದ್ದ 1956ನೇ ಮದ್ಯ ವರ್ಜನ ಶಿಬಿರಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮದ್ಯ ವ್ಯಸನಿಗಳಾಗುವ ಜತೆಗೆ ದುಶ್ಚಟಗಳ ದಾಸರಾಗಿ ತಮ್ಮ ಕುಟುಂಬಗಳನ್ನು ಬೀದಿಪಾಲು ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಕುಟುಂಬಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ಸಂಸ್ಥೆಯು ರಾಜ್ಯಾದ್ಯಂತ ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸಿ ದುಶ್ಚಟಗಳಿಂದ ದೂರ ಮಾಡುವ ಮೂಲಕ ಹಲವಾರು ಕುಟುಂಬಗಳಿಗೆ ಬೆಳಕಾಗಿರುವುದು ಸಂತಸದ ವಿಚಾರ ಎಂದು ಪ್ರಶಂಸಿಸಿದರು.

ದಿನನಿತ್ಯ ಸಂಪಾದನೆ ಮಾಡುವ ಹಣವನ್ನು ಕೇವಲ ದುಶ್ಚಟಗಳಿಗೆ ಬಳಕೆ ಮಾಡಿಕೊಂಡು ತಮ್ಮ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿರುವುದು ಆತಂಕಕಾರಿ ವಿಚಾರ. ಇದರಿಂದಾಗಿ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನಾ ಮಾತನಾಡಿ, ತಾಲೂಕಿನಲ್ಲಿರುವ ಹಲವು ಸಂಘ ಸಂಸ್ಥೆಗಳ ನೆರವಿನೊಂದಿಗೆ ತಾಲೂಕಿನಲ್ಲಿ 1956ನೇ ಮದ್ಯವರ್ಜನ ಶಿಬಿರ ಆಯೋಜಿಸಿ ಈ ಭಾಗದ ಹಲವು ಕುಟುಂಬಗಳಿಗೆ ನೆರವು ಒದಗಿಸುತ್ತಿದೆ. ನವಜೀವನ ಸದಸ್ಯರನ್ನು ಕುಡಿತದಿಂದ ಹೊರತಂದು ಸಮಾಜದಲ್ಲಿ ತಾವು ಸಹ ಬದುಕಬಹುದೆಂಬ ಗಟ್ಟಿ ನಿಲುವನ್ನು ಮೂಡಿಸಲು ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ದಶಕಗಳಿಂದಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕಿನಾದ್ಯಂತ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ನೆರವಾಗಿದೆ. ಶಿಬಿರದಲ್ಲಿ ಪಾಲ್ಗೊಂಡಿರುವ ಸುಮಾರು 40 ಜನ ನವಜೀವನ ಸಮಿತಿ ಸದಸ್ಯರು ಸಮಾಜದಲ್ಲಿ ತಾವು ಇತರರಂತೆ ಬದುಕಬಹುದು ಎಂಬುದನ್ನು ತೋರಿಸಲಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಯೋಜನಾಧಿಕಾರಿ ಹಾಲಪ್ಪ ಮಾತನಾಡಿ, ಶಿಬಿರಗಳನ್ನು ಪ್ರತಿ ತಾಲೂಕು ಕೇಂದ್ರದಲ್ಲಿ ಆಯೋಜಿಸಿ ಮದ್ಯ ವ್ಯಸನಿಗಳಿಗೆ ವ್ಯಾಯಾಮ, ಯೋಗ, ಧ್ಯಾನ, ಕೌಟುಂಬಿಕ ಸಲಹೆ, ಶಾರೀರಿಕ ಗುಂಪು, ವೈಯಕ್ತಿಕ ಸಲಹೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತಿದೆ. ನವ ಜೀವನ ಸಮಿತಿ ಸದಸ್ಯರು ಉತ್ತಮ ಬದುಕನ್ನು ಕಂಡುಕೊಳ್ಳಲಿ ಎಂಬ ಉದ್ದೇಶದಿಂದ ಸಾಲ ಸೌಲಭ್ಯ ವಿತರಿಸಿ ಸಮಾಜದ ಮುಖ್ಯ ವಾಹಿನಿಗೆ ಕರೆತರುತ್ತಿದ್ದಾರೆ ಎಂದರು.

ಮದ್ಯ ವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ಜಿ.ಶ್ರೀಕಂಠಯ್ಯ, ಉಪಾಧ್ಯಕ್ಷ ಬಿ.ವಿ.ಮಂಜುನಾಥ್, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಪಿ.ಲಿಂಗೇಗೌಡ, ಸದಸ್ಯರಾದ ಜಿ.ಆರ್.ಮುರಳೀಧರ್, ನ.ಲಿ.ಕೃಷ್ಣ, ಲಕ್ಷ್ಮೀ ಚನ್ನರಾಜು, ಗುರುಸ್ವಾಮಿ, ರವಿ, ಮಹಮ್ಮದ್ ಯೂಸಫ್, ನೈದಿಲೆ ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net