

ಮದ್ದೂರು: ನಂದಿನಿ ಪಾರ್ಲರ್ ಹಾಗೂ ಮೆಡಿಕಲ್ ಸ್ಟೋರ್‌ಗಳಲ್ಲಿ ಮಂಗಳವಾರ ಮುಂಜಾನೆ ಸರಣಿ ಕಳ್ಳತನ ನಡೆದಿದೆ.
ಪಟ್ಟಣದ ಪೇಟೆ ಬೀದಿಯ ಸರ್ಕಾರಿ ಆಸ್ಪತ್ರೆ ಬಳಿ ಇರುವ ಕೃಷ್ಣ ಮೆಡಿಕಲ್, ಸಾಯಿ ಮೆಡಿಕಲ್, ಕಾಲಭೈರವ ಮೆಡಿಕಲ್ ಹಾಗೂ ಪ್ರದೀಪ್ ಎಂಬುವರಿಗೆ ಸೇರಿದ ನಂದಿನಿ ಪಾರ್ಲರ್ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ನಗದು ಹಾಗೂ ಇನ್ನಿತರ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕಳ್ಳರು ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳನ್ನು ಪರಿಶೀಲಿಸಿ ಕೃಷ್ಣ ಮೆಡಿಕಲ್ ಸ್ಟೋರ್‌ನ ಗಲ್ಲಾಪೆಟ್ಟಿಗೆಯಲ್ಲಿದ್ದ ಸುಮಾರು 15 ಸಾವಿರ ರೂ. ನಗದು, ಇತರ ಅಂಗಡಿಗಳಲ್ಲಿದ್ದ ನಗದು ಹಾಗೂ ನಂದಿನಿ ಪಾರ್ಲರ್‌ನಲ್ಲಿ ಬಿಸ್ಕೆಟ್ ಮತ್ತು ಇನ್ನಿತರ ವಸ್ತುಗಳನ್ನು ದೋಚಿದ್ದಾರೆ.
ಎಂದಿನಂತೆ ಮಂಗಳವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಆಗಮಿಸಿದ ವೇಳೆ ಸರಣಿ ಕಳ್ಳತನ ನಡೆದಿರುವ ತಿಳಿದಿದೆ. ಸ್ಥಳಕ್ಕೆ ಅಪರಾಧ ವಿಭಾಗದ ಪಿಎಸ್‌ಐ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.