

ಮುಂಡಗೋಡ: ಮದುವೆಯಾಗುವುದಾಗಿ ಪುಸಲಾಯಿಸಿ ಯುವತಿಗೆ ಮೋಸ ಮಾಡಿದ್ದಲ್ಲದೆ, ಜಾತಿ ನಿಂದನೆ ಮಾಡಿರುವ ಕುರಿತು ಹುಬ್ಬಳ್ಳಿ ಉಣಕಲ್ ನಿವಾಸಿ ಬಸವರಾಜ ಬೀವಳ್ಳಿ ಮತ್ತು ಆತನ ಕುಟುಂಬದವರ ಮೇಲೆ ಬುಧವಾರ ಪ್ರಕರಣ ದಾಖಲಾಗಿದೆ.
ಬಸವರಾಜ ವೀರಭದ್ರೇಶ್ವರ ಕಾಲನಿಯ ಮಳಿಗೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ . ಈ ವೇಳೆ ಸವಣೂರ ತಾಲೂಕಿನ ಯುವತಿಯನ್ನು ಕೆಲಸಕ್ಕೆ ಸೇರಿಸಿ ಕೊಳ್ಳಲು ಸಹಕರಿಸಿದ್ದ. ನಂತರ ಯುವತಿಗೆ ಇಚ್ಛೆ ಇಲ್ಲದಿದ್ದರೂ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಆಕೆ ಗರ್ಭವತಿಯೂ ಆದಳು. ಆಗ ಅವಳಿಗೆ ಗರ್ಭಪಾತವನ್ನು ಮಾಡಿಸಿದ್ದ. ವಿಷಯ ಯಾರಿಗಾದರೂ ತಿಳಿಸಿದರೆ ಜೀವ ತೆಗೆಯುವುದಾಗಿ ಬೆದರಿಕೆಯನ್ನೂ ಹಾಕಿದ್ದ. ಅಲ್ಲದೆ, ಈಕೆಯ ಜಾತಿಯ ವಿಷಯವನ್ನು ತೆಗೆದು ಅವಹೇಳನ ಮಾಡಿದ್ದ.
ಈಕೆಗೆ ಮದುವೆಯಾಗುವ ಭರವಸೆ ನೀಡಿದ್ದ ಬಸವರಾಜ ತನ್ನ ಅಕ್ಕನ ಮಗಳೊಂದಿಗೆ ಮದುವೆ ತಯಾರಿ ನಡೆಸಿದ್ದ. ಅಲ್ಲದೆ, ಕೊಲೆಯ ಸಂಚನ್ನೂ ರೂಪಿಸಿದ್ದ. ಇದನ್ನು ಅರಿತ ಯುವತಿ ಬಸವರಾಜ ನಿವಾಸಕ್ಕೆ ತೆರಳಿ, ತನಗೆ ಆದ ಅನ್ಯಾಯವನ್ನು ತಿಳಿಸಿದ್ದಾಳೆ. ಈ ಸಮಯದಲ್ಲಿ ಬಸವರಾಜನ ಕುಟುಂಬಸ್ಥರಾದ ಶಿವಾನಂದ, ಗೌರಮ್ಮ, ಕಲ್ಲವ್ವ ಅವರು ಯುವತಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಹಿಗ್ಗಾ-ಮುಗ್ಗಾ ಥಳಿಸಿದ್ದರು. ಮತ್ತೆ ಬಸವರಾಜ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಹುನಗುಂದ ಗ್ರಾಮಕ್ಕೆ ಕರೆಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿ ಮಾ.18ರಂದು ಬಲವಂತದಿಂದ ತಾನು ತಂದ ವಿಷವನ್ನು ಕುಡಿಸಿದ್ದಾನೆ. ಯುವತಿ ಪ್ರಜ್ಞೆ ತಪ್ಪಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಪ್ರಜ್ಞೆ ಬಂದ ನಂತರ ತನ್ನ ತಂದೆ-ತಾಯಿಗೆ ವಿಷಯ ತಿಳಿಸಿದ್ದಾಳೆ. ಆರೋಪಿಯೇ ಕೊಣನಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿಗ್ಗಾಂವಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಯುವತಿಯ ತಂದೆ-ತಾಯಿ ಮತ್ತು ತಮ್ಮಂದಿರು ಹೆಚ್ಚಿನ ಚಿಕಿತ್ಸೆಗೆ ಯುವತಿಯನ್ನು ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಆರೋಪಿ ಯುವತಿಯ ತಂದೆ-ತಾಯಿಗೆ ಸ್ವಲ್ಪ ಹಣ ಕೊಡುತ್ತೇನೆ ಬೇರೆ ಯುವಕನನ್ನು ನೋಡಿ ಮದುವೆ ಮಾಡಿಸಿ ಎಂದು ಆಮಿಷ ಒಡ್ಡಿದ್ದಾನೆ. ಆರೋಪಿಯ ದುಷ್ಕೃತ್ಯದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿಯ ಸಹೋದರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.