

ಕಲಬುರಗಿ: ನಾಗನಹಳ್ಳಿಯಲ್ಲಿ ಸೆ.೨೦ರಂದು ನಡೆದಿದ್ದ ಯುವ ಸುಮಿತ್ (೧೯) ಕೊಲೆ ಪ್ರಕರಣದ ಆರು ಆರೋಪಿಗಳನ್ನು ಘಟನೆ ನಡೆದ ೨೪ಗಂಟೆಯಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ತಿಳಿಸಿದರು.
ನಾಗನಹಳ್ಳಿ ಗ್ರಾಮದವರೇ ಆದ ವರುಣ, ಸಿದ್ದು, ಪ್ರಜ್ವಲ, ರಾಜಕುಮಾರ, ವರ್ಷಾ, ಜಯಮ್ಮ ಬಂಧಿತ ಆರೋಪಿಗಳು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲೆಗೀಡಾದ ಸುಮೀತ್ ಸಹೋದರ ಸಚಿನ್‌ನನು ಯುವತಿ ವರ್ಷಾಳನ್ನು ಹಲವು ದಿನದಿಂದ ಪ್ರೀತಿಸುತ್ತಿದೆ. ಈ ಕುರಿತು ಹಿಂದೆಯೂ ಇಬ್ಬರ ಕುಟುಂಬದ ಮಧ್ಯೆ ಮದುವೆ ಮಾತುಕತೆ ನಡೆದಿದ್ದು, ನಿರಾಕರಿಸಲಾಗಿತ್ತು. ಈ ಮಧ್ಯೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಸುಮೀತ್ ಮತ್ತು ಆತನ ತಾಯಿ ನಾಗನಹಳ್ಳಿಗೆ ಆಗಮಿಸಿ, ಮದುವೆ ಮಾತುಕತೆಗೆ ಮುಂದಾಗಿದ್ದಾಗ ಘಟನೆ ನಡೆದಿದೆ ಎಂದು ತಿಳಿಸಿದರು.
ಮದುವೆ ಕುರಿತು ಸುಮೀತ್, ಆತನ ತಾಯಿ ಯುವತಿ ಸಹೋದರ ವರುಣ ಜತೆ ಚರ್ಚಿಸುವ ವೇಳೆ ವಾಗ್ವಾದ ಆರಂಭವಾಗಿದ್ದು, ವರುಣನು ಸುಮೀತ್‌ನಿಗೆ ಚಾಕುವಿನಿಂದ ಇರಿದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ. ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.
ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಎಸಿಪಿ ಡಿ.ಜಿ.ರಾಜಣ್ಣ ಮಾರ್ಗದರ್ಶನದಲ್ಲಿ ಪಿಐ ಸುಶೀಲಕುಮಾರ ನೇತೃತ್ವದಲ್ಲಿ ಪಿಎಸ್‌ಐ ಅನೀಲ ಜೈನ್ ಮತ್ತು ಸಿಬ್ಬಂದಿ ಸಂಜುಕುಮಾರ, ಸುಲ್ತಾನ, ಪ್ರಕಾಶ, ಪ್ರಕಾಶ, ರಾಜಕುಮಾರ, ಕಿಶೋರ, ಈರಣ್ಣ, ರೇಣುಕಾ ಅವರ ತಂಡ ಖಚಿತ ಮಾಹಿತಿ ಕಲೆ ಹಾಕಿ, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಇಬ್ಬರು ಆರೋಪಿಗಳನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.