ಮದಿರೆಯ ರೇಟು ಮೂರು ಪಟ್ಟು

8-RNR-01
Published on

ರಾಣೆಬೆನ್ನೂರ : ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಸರ್ಕಾರ ಲಾಕ್​ಡೌನ್ ಘೊಷಿಸಿರುವುದು ಅಕ್ರಮ ಮದ್ಯ ಮಾರಾಟಗಾರರಿಗೆ ವರದಾನವಾಗಿ ಪರಿಣಮಿಸಿದೆ.

ಗ್ರಾಮೀಣ ಭಾಗದಲ್ಲಿ ದಂಧೆಕೋರರು ಲಾಕ್​ಡೌನ್ ಅನ್ನು ಬಂಡವಾಳ ಮಾಡಿಕೊಂಡಿದ್ದು, ಮೂರು ಪಟ್ಟು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಆದರೆ, ಇಂಥವರ ವಿರುದ್ಧ ಕ್ರಮ ಜರುಗಿಸಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ನಿದ್ದೆಗೆ ಜಾರಿದಂತಿದೆ. ತಾಲೂಕಿನ ಹೆಡಿಯಾಲ, ಚಳಗೇರಿ, ಬೇಲೂರು, ಊದಗಟ್ಟಿ, ಯಕ್ಲಾಸಪುರ ಸೇರಿ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ತುಂಗಭದ್ರಾ ನದಿ ಪಾತ್ರದ ಹರಿಹರ ಭಾಗದ ಗ್ರಾಮಗಳಿಂದ ಬೈಕ್, ಆಟೋ ಮೂಲಕ ಅಕ್ರಮವಾಗಿ ಮದ್ಯ ತರಲಾಗುತ್ತಿದೆ. ವಿವಿಧ ಬ್ರ್ಯಾಂಡ್​ನ ಕಡಿಮೆ ಬೆಲೆಯ ಲಿಕ್ಕರ್​ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.

ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿರುವ ಕಾರಣ ಅಕ್ರಮ ಮದ್ಯ ಮಾರಾಟಕ್ಕೆ ಅಂಕುಶ ಹಾಕಿದಂತಾಗಿದೆ.

ಮೂರು ಪಟ್ಟು ಬೆಲೆ ಹೆಚ್ಚಳ: ಕ್ವಾರ್ಟರ್ ಬ್ಯಾಗ್​ಪೈಪರ್ 95 ರೂ., ಬೆಂಗಳೂರು ವಿಸ್ಕಿ 100 ರೂ., ಒರಿಜಿನಲ್ ಚಾಯ್್ಸ 72 ರೂ. ದರವಿದೆ. ಆದರೀಗ ಲಾಕ್​ಡೌನ್ ಹಿನ್ನೆಲೆಯಲ್ಲಿ ‘ಎಲ್ಲರಿಗೂ ಮಾಮೂಲಿ ಕೊಡಬೇಕಪ್ಪ’ ಎಂದು ಹೇಳುತ್ತ ಅಕ್ರಮ ಮದ್ಯ ಮಾರಾಟಗಾರರು ಕ್ವಾರ್ಟರ್​ಗೆ ಮೂರು ಪಟ್ಟು ದುಡ್ಡು ವಸೂಲಿ ಮಾಡುತ್ತಿದ್ದಾರೆ. ಆದರೆ, ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯವರು ಕಡಿವಾಣ ಹಾಕಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಂಬಂತೆ ಮಾ. 30ರಂದು ಹಲಗೇರಿ ಠಾಣೆ ಪೊಲೀಸರು 5 ಲಕ್ಷ ರೂ. ಮೌಲ್ಯದ 183 ಬಾಕ್ಸ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಆದರೆ, ಅಬಕಾರಿ ಇಲಾಖೆಯಿಂದ ಏ. 5ರಂದು ತಾಲೂಕಿನ ಊದಗಟ್ಟಿ ಗ್ರಾಮದಲ್ಲಿ 3.5 ಲೀಟರ್ ಮದ್ಯ ವಶಪಡಿಸಿಕೊಂಡಿರುವ ಒಂದು ಪ್ರಕರಣ ಹೊರತುಪಡಿಸಿದರೆ, ಈವರೆಗೂ ಹೇಳಿಕೊಳ್ಳುವಂತಹ ಪ್ರಕರಣ ಪತ್ತೆ ಹಚ್ಚಿಲ್ಲ. ಚಳಗೇರಿ ಗ್ರಾಮದಲ್ಲಿ ವಿಪರೀತ ಮದ್ಯ ಮಾರಾಟ ನಡೆಯುತ್ತಿದೆ. ಈ ಒಂದು ಗ್ರಾಮದಲ್ಲಾದರೂ ತಡೆಯಲಿ ಎಂಬುದು ಜನರ ಆಗ್ರಹವಾಗಿದೆ.

ತಾಂಡಾ, ಗ್ರಾಮೀಣ ಭಾಗದಲ್ಲಿ ನಮ್ಮ ಸಿಬ್ಬಂದಿ, ನಾವು ಓಡಾಡುತ್ತಿದ್ದೇವೆ. ಮೂರು ಪಟ್ಟು ಬೆಲೆ ಹೆಚ್ಚಳ ಮಾಡಿರುವುದು ಮಾಹಿತಿ ಬಂದಿದೆ. ಈವರೆಗೂ ಒಂದು ಪ್ರಕರಣ ದಾಖಲು ಮಾಡಿದ್ದೇವೆ. ಬೇರೆಡೆ ಕಂಡುಬಂದಲ್ಲಿ ಕೂಡಲೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. | ಆನಂದ ಅಡಿಗಲ್ಲ ಅಬಕಾರಿ ನಿರೀಕ್ಷಕ

ಅಕ್ರಮ ಮದ್ಯ ಮಾರಾಟ ತಡೆದಿದ್ದಕ್ಕೆ ಹಲಗೇರಿ ಠಾಣೆ ಪಿಎಸ್​ಐ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ. ಆದರೆ, ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಹೋರಾಡಬೇಕಾದ ಅಬಕಾರಿ ಇಲಾಖೆಯವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಲಾಕ್​ಡೌನ್​ನಿಂದ ಪತಿ ಮನೆಯಲ್ಲಿ ಇರುತ್ತಾನೆ ಎಂದುಕೊಂಡರೆ ಈ ಊರು, ಆ ಊರು ಅಂತಾ ಅಲೆದಾಡಿ ಮದ್ಯ ಸೇವಿಸಿ ಬರುತ್ತಿದ್ದಾನೆ. ಹಾಗಾದರೆ ಇವರಿಗೆ ಮದ್ಯ ಎಲ್ಲಿಂದ ಸಿಗುತ್ತಿದೆ. ಅಧಿಕಾರಿಗಳು ಕುಮ್ಮಕ್ಕು ನೀಡಿ, ಅಕ್ರಮವಾಗಿ ಮಾರಾಟ ಮಾಡಲು ಬಿಟ್ಟಿದ್ದಾರೆಯೇ? | ಕಮಲವ್ವ ನಾಯಕ ಗ್ರಾಮೀಣ ಭಾಗದ ಮಹಿಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net