

ಸೋಮವಾರಪೇಟೆ: ಬೆಳೆಗಾರರಿಗೆ ಕಾಫಿ ಫಸಲು ಹಾನಿ ವರದಿ ತೃಪ್ತಿಕರವಾಗದಿದ್ದಲ್ಲಿ ಮತ್ತೊಮ್ಮೆ ಬೆಳೆ ಹಾನಿ ಸರ್ವೇ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸುವುದಾಗಿ ಶಾಸಕ ಡಾ.ಮಂತರ್‌ಗೌಡ ಭರವಸೆ ನೀಡಿದರು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ-ಎಡದಂಟೆ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ ಮಾತನಾಡಿ, ಕಳೆದ ಮೇ ತಿಂಗಳಿನಿಂದ ಮಳೆ ಸುರಿಯುತ್ತಲೇ ಇದೆ. ಕಾಳುಮೆಣಸು ಸಂಪೂರ್ಣ ನಾಶವಾಗಿದೆ. ಕಾಫಿ ಕೂಡ ಅನೇಕ ಕಡೆ ಶೇ.60 ಹಾನಿಯಾಗಿದೆ. ಆದರೆ, ಬೆಳೆ ಹಾನಿ ಸರ್ವೇ ಪ್ರಕಾರ ಶೇ.33 ಹಾನಿಯಾಗಿಲ್ಲ ಎಂಬ ವರದಿ ನೀಡಿರುವ ಬಗ್ಗೆ ಮಾಹಿತಿ ಇದ್ದು, ಮತ್ತೊಮ್ಮೆ ಕಾಫಿ ಬೆಳೆ ಹಾನಿ ಸರ್ವೇ ಮಾಡಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಶೇ.33 ಕಾಫಿ ಫಸಲು ಹಾನಿಯಾಗಿದ್ದರೆ, ಪರಿಹಾರ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಈ ಕಾರಣದಿಂದ ಬೆಳೆಗಾರರ ಆಶಯದಂತೆ ಬೆಳೆ ಹಾನಿ ಸರ್ವೇ ಮಾಡಿಸಲಾಗುವುದು ಎಂದು ತಿಳಿಸಿದರು.
ಎಡದಂಟೆ ಜಲಪಾತ ವೀಕ್ಷಿಸಿದ ಶಾಸಕರು, ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಮಾಡಿಕೊಡಲು, ಜಲಪಾತ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕಲ್ಪಿಸಲಾಗುವುದು. ಮೊದಲು ಮೆಟ್ಟಿಲುಗಳನ್ನು ನಿರ್ಮಿಸಲು ಅಂದಾಜುಪಟ್ಟಿ ತಯಾರಿಸುವಂತೆ ಲೋಕೋಪಯೋಗಿ ಇಲಾಖೆ ಎಇಇ ಅವರಿಗೆ ಸೂಚಿಸಿದರು.
ಕೂತಿ ಮುಖ್ಯ ರಸ್ತೆಯಿಂದ ಎಡದಂಟೆ ಗ್ರಾಮಕ್ಕೆ ಒಂದೂವರೆ ಕಿ.ಮೀ ರಸ್ತೆ ಅಭಿವೃದ್ಧಿಗೆ ಅನುದಾನ ಕಲ್ಪಿಸುವಂತೆ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಎಂ.ರವಿ ಮನವಿ ಮಾಡಿದರು. ರಸ್ತೆ ಅಭಿವೃದ್ಧಿಗೆ ಅನುದಾನ ಕಲ್ಪಿಸುವ ಭರವಸೆಯನ್ನು ಶಾಸಕರು ನೀಡಿದರು.
ಜಲಪಾತ ಅಭಿವೃದ್ಧಿ ಹಾಗೂ ಅದೇ ಮಾರ್ಗವಾಗಿ ರುದ್ರಗಿರಿ ಬೆಟ್ಟಕ್ಕೆ ಸಂಪರ್ಕ ರಸ್ತೆಗಾಗಿ 5 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಈ ಹಿಂದಿಯೇ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ, ಅನುದಾನ ಸಿಕ್ಕಿಲ್ಲ ಎಂದು ಬಿ.ಎಂ.ಲವ ಶಾಸಕರ ಗಮನಕ್ಕೆ ತಂದರು. ಮೊದಲು ಲೋಕೋಪಯೋಗಿ ಇಲಾಖೆಯಿಂದ ಗ್ರಾಮದ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿ ನಂತರ, ಪ್ರವಾಸೋದ್ಯಮ ಇಲಾಖೆಯಿಂದ ಅನುದಾನಕ್ಕೆ ಪ್ರಯತ್ನ ಮಾಡೋಣ ಎಂದು ಶಾಸಕರು ಹೇಳಿದರು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ, ಗ್ರಾಮಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಿ.ಎಂ.ಗಿರೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಕೆಡಿಪಿ ಸದಸ್ಯ ಕೆ.ಯು.ಜಗದೀಶ್, ಪಿಡಿಒ ಹರೀಶ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.