

ಕನಕಪುರ : ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತ್ರೀರೋಗ ತಜ್ಞೆಯ ಮೇಲೆ ಭ್ರೂಣ ಪತ್ತೆ ಮತ್ತು ಹತ್ಯೆಯ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖೆ ಮುಗಿಯುವವರೆಗೂ ಇಲ್ಲಿನ ಆಸ್ಪತ್ರೆಗೆ ಅವರನ್ನು ನಿಯೋಜಿಸಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಆಗ್ರಹಿಸಿದೆ.
ನಗರದ ಗಣಪತಿ ದೇವಾಲಯದಲ್ಲಿ ಸೋಮವಾರ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಸಭೆಯಲ್ಲಿ ಪ್ರಗತಿಪರ ಸಂಘಟನೆಯ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ. ಭ್ರೂಣ ಪತ್ತೆ ಮತ್ತು ಹತ್ಯೆಯ ಪ್ರಕರಣ ದಾಖಲಾಗಿ ಇವರನ್ನು ಅಮಾನತ್ತುಗೊಳಿಸಿ ತನಿಖೆ ಮುಂದುವರಿದಿದೆ, ತನಿಖೆ ಮುಗಿಯುವವರೆಗೂ ಇಲ್ಲಿಗೆ ಕೆಲಸ ಮಾಡುವುದು ಬೇಡ ಎಂದು ಒತ್ತಾಯಿಸಿದರು.
ಮಂಡ್ಯ ಸೇರಿ ರಾಜ್ಯದ ಹಲವೆಡೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ದೊಡ್ಡ ಸದ್ದು ಮಾಡಿತ್ತು, ಆ ಸಮಯದಲ್ಲಿ ಇಲ್ಲಿನ ಹೆರಿಗೆ ಆಸ್ಪತ್ರೆಯ ವೈದ್ಯೆ ದಾಕ್ಷಾಯಿಣಿ ಮತ್ತಿತರರ ಮೇಲೂ ಪ್ರಕರಣ ದಾಖಲಾಗಿ ಇವರನ್ನು ಅಮಾನತುಗೊಳಿಸಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ತಮ್ಮ ಪ್ರಭಾವ ಬಳಸಿ ಮತ್ತೆ ಇಲ್ಲಿಗೆ ಬರುತ್ತಿದ್ದಾರೆ, ಇವರ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆಯೇ ವಿನಃ ಪ್ರಕರಣವನ್ನು ರದ್ದುಪಡಿಸಿಲ್ಲ, ಅಮಾನತ್ತಿಗೆ ತಡೆಯಾಜ್ಞೆ ಆಗಿದೆ. ಪ್ರಕರಣದಿಂದ ಮುಕ್ತರಾದ ನಂತರ ಇಲ್ಲಿ ಕೆಲಸ ನಿರ್ವಹಿಸಬಹುದು. ತನಿಖೆಯ ಸಾಕ್ಷಿಗಳನ್ನು ಇವರು ನಾಶಪಡಿಸುವ ಸಂಭವವಿದೆ. ಆದ್ದರಿಂದ ಪ್ರಕರಣ ಮುಗಿಯುವವರೆಗೂ ಬೇರೆ ಕಡೆ ಕೆಲಸ ನಿರ್ವಹಿಸಬಹುದು, ಇಲ್ಲಿಗೆ ಬರಬೇಕೆಂಬ ಹಠ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಇಲ್ಲಿನ ಪ್ರಸೂತಿ ವೈದ್ಯೆ ದಾಕ್ಷಾಯಣಿ ಅವರ ಮೇಲೆ ಹಲವು ಗುರುತರ ಆರೋಪಗಳಿವೆ. ರೈತ ಸಂಘದಿಂದ ಬಡ ರೈತ ಹೆಣ್ಣುಮಕ್ಕಳ ಬಳಿ ಲಂಚ ಕೇಳಿದ ಆಡಿಯೋವನ್ನು ದಾಖಲಿಸಿ ದೂರು ನೀಡಲಾಗಿತ್ತು, ಆದರೂ ಇವರ ಮೇಲೆ ಇಲಾಖೆ ಕಾನೂನು ಕ್ರಮ ಕೈಗೊಂಡಿಲ್ಲ, ಲಂಚ ನೀಡದ ಪ್ರಕರಣಗಳಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ, ಅಲ್ಲದೆ ಭ್ರೂಣ ಹತ್ಯೆ ಪ್ರಕರಣ ಇವರ ಮೇಲೆ ಇರುವುದರಿಂದ ಪ್ರಕರಣ ಮುಗಿಯುವವರೆಗೂ ಇಲ್ಲಿಗೆ ನಿಯೋಜನೆ ಮಾಡುವುದು ಸೂಕ್ತವಲ್ಲ ಎಂದರು.
ನಗರಸಭಾ ಸದಸ್ಯ ಸ್ಟೂಡಿಯೋ ಚಂದ್ರು, ನೇಗಿಲಯೋಗಿ ಸಂಘಟನೆಯ ಗಬ್ಬಾಡಿ ಕಾಡೇಗೌಡ, ಜೀವನ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ, ವೈಭವ ಕರ್ನಾಟಕ ಜಿಲ್ಲಾಧ್ಯಕ್ಷ ಪುಟ್ಟಲಿಂಗಯ್ಯ, ರೇಷ್ಮೆ ಉತ್ಪಾದಕರ ಸಂಘದ ಅಧ್ಯಕ್ಷ ರಾಮಕೃಷ್ಣ, ಕನ್ನಡ ಭಾಸ್ಕರ್, ಜಯಕರ್ನಾಟಕ ಜನಪರ ವೇದಿಕೆ ಗಿರೀಶ್, ಮರಳವಾಡಿ ಕಿಶೋರ್, ರೈತ ಸಂಘದ ಕನಕಪುರ ತಾಲ್ಲೂಕು ಅಧ್ಯಕ್ಷ ಕುಮಾರ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಸವರಾಜು, ಮುಖಂಡರಾದ ಮುನಿಶಿವಣ್ಣ, ರವಿ, ಸಿದ್ದರಾಜು, ರವಿಕುಮಾರ್, ಕೆಂಪಣ್ಣ ಇದ್ದರು